ಹೊಳೆನರಸೀಪುರ: ಹತ್ತಾರು ವರ್ಷಗಳಿಂದ ಜೆಡಿಎಸ್ ಕಟ್ಟಾ ಬೆಂಬಲಿಗರಾಗಿದ್ದ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅತ್ಯಾಪ್ತರೆನಿಸಿಕೊಂಡಿದ್ದ ಜೆಡಿಎಸ್ ಮುಖಂಡರು ಬುಧವಾರ ಹೊಳೆನರಸೀಪುರದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಮುಖಂಡ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಹೊಳೆನರಸೀಪುರದ ರಾಜಕೀಯದಲ್ಲಿ ಅಚ್ಚರಿ ಬೆಳವಣಿಗೆಗೆ ಕಾರಣವಾಗಿದ್ದಾರೆ.
ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು ಹಾಗೂ ಮುಖಂಡ ಓಲೆ ಕುಮಾರ್ ಮತ್ತಿತರ ೧೦೦ ಕ್ಕೂ ಹೆಚ್ಚು ಮಂದಿ ಪ್ರಮುಖ ಜೆಡಿಎಸ್ ಮುಖಂಡರು ರೇವಣ್ಣ ಸಾಂಗತ್ಯವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಮುಖಂಡರಾದ ದಿ. ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ನಿವಾಸದಲ್ಲಿ ಡಿ.ಕೆ.ಸುರೇಶ್ ಅವರ ಸಮ್ಮುಖದಲ್ಲಿ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ ಬಾವುಟ ನೀಡುವ ಮೂಲಕ ಕಾಂಗ್ರೆಸ್‌ಗೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಡಿ.ಕೆ ಸುರೇಶ್ ಇಲ್ಲಿಯ ಕಾಂಗ್ರೆಸ್ ಕಾರ್ಯಕರ್ತರನ್ನು ನೋಡಿದರೆ ಪ್ರೀತಿ, ಗೌರವ ಹುಟ್ಟುತ್ತದೆ. ಇಲ್ಲಿನ ಜನತೆ ದಶಕಗಳ ಕಾಲ ನೋವುಂಡವರು. ಪ್ರಸ್ತುತ ಜನರು ದಾಸ್ಯದಿಂದ ಹೊರ ಬರಲು ಮುಂದಾಗುತ್ತಿದ್ದಾರೆ. ಜೆಡಿಎಸ್ ಕುಟುಂಬದ ದರ್ಪ ಹಾಗೂ ದೌರ್ಜನ್ಯ ದಾಸ್ಯದಿಂದ ಮತದಾರರು ಪಾರಾಗಲು ನಿಮ್ಮ ಜೊತೆ ಕಾಂಗ್ರೆಸ್ ಪಕ್ಷವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬ್ರಾಹ್ಮಣ ಸಿಎಂ ಎಂಬ ಹೇಳಿಕೆಗೆ ನಮ್ಮ ಸಂವಿಧಾನ ಬಹಳ ಗಟ್ಟಿಯಾಗಿದೆ .ಯಾವುದೇ ಕುಟುಂಬಕ್ಕೆ ಅಥವಾ ವರ್ಗಕ್ಕೆ ಮುಖ್ಯಮಂತ್ರಿ ಹುದ್ದೆ ಸೀಮಿತವಾಗಿರದು ಎಂದರು. ಪಕ್ಷ ಜಿಲ್ಲೆಯಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುತ್ತದೆ .ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪ್ರಬಲ ಸ್ಪರ್ಧೆ ನೀಡುತ್ತದೆ. ಇದಕ್ಕೆ ಹೊಳೆನರಸೀಪುರ ಹೊರತಾಗಿಲ್ಲ ಎಂದರು.
ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಇದು ಪಕ್ಷದ ವರಿಷ್ಟರ ತೀರ್ಮಾನಕ್ಕೆ ಬಿಟ್ಟ ವಿಚಾರ. ನಾವಂತೂ ಕಾಂಗ್ರೆಸ್ ಪಕ್ಷಕ್ಕೆ ಬರುವವರನ್ನು ಮುಕ್ತವಾಗಿ ಆಹ್ವಾನಿಸುತ್ತೇವೆ ಎಂದರು.
ಇದಕ್ಕು ಮುನ್ನ ಪಟ್ಟಣದಲ್ಲಿ ಸಾವಿರಾರು ಕಾರ್ಯಕರ್ತರು ಪಟ್ಟಣದ ಗಾಂಧಿ ಪ್ರತಿಮೆ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.