ಸಕಲೇಶಪುರ: ಸ್ಥಳೀಯರಿಗೆ ನಿರಂತರ ಕಿರುಕುಳ ನೀಡುತ್ತಿರುವ ಸುಬಾಷ್ ಎಂಬ ರೌಡಿ ಶೀಟರನ್ನು ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿ ಅಗ್ನಿಶಾಮಕ ಇಲಾಖೆಯ ನಿವೃತ್ತ ತನಿಖಾಧಿಕಾರಿ ಕೆ.ಪಿ. ರೇವಣ್ಣ ಮನವಿ ಮಾಡಿ ಒತ್ತಾಯಿಸಿದರು.
ತಾಲೂಕು ಕಡಗರವಳ್ಳಿ ಗ್ರಾಮದಲ್ಲಿನ ಕಳೆದ ಹಲವಾರು ವರ್ಷಗಳಿಂದ ಸುಬಾಷ್ ಎಂಬ ರೌಡಿ ಶೀಟರ್ ಸ್ಥಳೀಯರಿಗೆ ನಿರಂತರ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಸಕಲೇಶಪುರ ಠಾಣೆಗೆ ದೂರು ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ, ಪೊಲೀಸರೇ ರೌಡಿ ಶೀಟರ್ ಜೊತೆ ಶಾಮೀಲಾಗಿ ಆತನಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚೆಗೆ ಜಮೀನು ವಿಚಾರವಾಗಿ ತನ್ನ ಮೇಲೆ ರೌಡಿಶೀಟರ್ ಮಾರಣಾಂತಿಕ ಹಲ್ಲೆ ಮಾಡಿದ್ದು, ಈ ಬಗ್ಗೆ ಸಕಲೇಶಪುರ ಠಾಣೆಗೆ ದೂರು ನೀಡಿದ್ದೆ. ಆದರೆ ಆರೋಪಿ ಸುಭಾಷ್ ಅವರನ್ನೇ ಕುಳ್ಳಿರಿಸಿ ಆತ್ಮೀಯವಾಗಿ ಮಾತನಾಡಿಸುವ ಮೂಲಕ, ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹೇಳಿದರು.
ಈಗಾಗಲೇ ಈತನ ಮೇಲೆ ಅಕ್ರಮ ಮರಳು ಸಾಗಾಟ, ಮಹಿಳೆಯರ ಮೇಲೆ ಹಲ್ಲೆ, ಅಕ್ರಮ ಚಟುವಟಿಕೆಗಳ ಮೇಲೆ ಅನೇಕ ಕೇಸುಗಳು ಇದ್ದರು ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಅಲ್ಲದೆ ಪೊಲೀಸರೇ ರಾಜಿ ಸಂಧಾನ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದು ಇದು ಪೊಲೀಸರು ರೌಡಿಶೀಟರ್ ಜೊತೆ ಶಾಮೀಲಾಗಿರುವುದಕ್ಕೆ ಕೈಗನ್ನಡಿಯಾಗಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸುಭಾಷ್ ನನ್ನು ಗಡಿಪಾರು ಮಾಡಿ ನ್ಯಾಯ ಒದಗಿಸಿಕೊಡಲು ಕೋರಿದರು.