ಹಾಸನ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂಪನಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಹರೀಶ್ ಅವರ ದ್ವಿತಿಯ ಪುತ್ರ ಹೆಚ್.ಯೋಗೇಶ್ (೨೮) ಆತ್ಮಹತ್ಯೆಗೆ ಶರಣಾದ ಯೋಧ . ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಜ.೪ ರಂದು ಕರ್ತ ವ್ಯಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ಯೋಗೇಶ್ ಅವರು ತಮ್ಮ ಪತ್ನಿ ದೀಕ್ಷಾ ಹಾಗೂ ಕುಟುಂಬಸ್ಥರೊಂದಿಗೆ ಒಂದು ತಿಂಗಳಿಂದ ಚೆನ್ನಾಗಿದ್ದರು. ಮಂಗಳವಾರ ಬೆಳಗ್ಗೆ ೧೦ ಗಂಟೆ ಸಮಯವಾದರೂ ಯೋಗೇಶ್ ಮಲಗಿದ್ದ ರೂಂ ಬಾಗಿಲು ತೆರೆದಿರಲಿಲ್ಲ. ಮನೆಯವರು ಎಷ್ಟು ಕೂಗಿದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಬಾಗಿಲನ್ನು ಒಡೆದು ನೋಡಿದಾಗ ಯೋಗೇಶ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು ಪರೀಕ್ಷಿಸಿ ಯೋಧ ಯೋಗೀಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ಯೋಧನ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಹಂಪನಗುಪ್ಪೆ ಗ್ರಾಮಕ್ಕೆ ತಂದಿದ್ದು, ಗ್ರಾಮಸ್ಥರು ಮತ್ತು ಸಂಬಂಧಿಗಳ ಸಮ್ಮುಖದಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಯೋಗೇಶ್ ಅವರು ೨೦೧೧ ರಲ್ಲಿ ಹಾಸನದಲ್ಲಿ ನಡೆದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು