ಸಕಲೇಶಪುರ: ಪಶ್ಚಿಮ ಘಟ್ಟದ ಕಾಡಿನಲ್ಲಿ ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿ ನಂದಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಸಕಲೇಪುರ ತಾಲ್ಲೂಕಿನ ಕಾಡುಮನೆ ಸಮೀಪ ಮಣಿಬೀಡು ದೇವಸ್ಥಾನದ ಸಮೀಪದಲ್ಲಿ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಕಾಡುಮನೆ ಸಮೀಪ ಮಣಿಬೀಡು ದೇವಸ್ಥಾನದ ಸಮೀಪವಿರುವ ಪಶ್ಚಿಮ ಘಟ್ಟದ ಕಾಡಿನಲ್ಲಿ ಅಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಹೋದ ಅರಣ್ಯ ಇಲಾಖೆಯ ಫಾರೆಸ್ಟರ್ ಮಂಜುನಾಥ್, ಅರಣ್ಯ ವೀಕ್ಷಕ ಸುಂದರೇಶ್ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ನರಳುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮತ್ತೊರ್ವ ಅರಣ್ಯ ವೀಕ್ಷಕ ತುಂಗೇಶ್ ತುಸು ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಗಳನ್ನು ಗ್ರಾಮಸ್ಥರು ಹಾಗೂ ಇತರ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ಸುಮಾರು ೧೨ ಕಿ.ಮೀ ದೂರ ಎತ್ತಿ ಕೊಂಡು ಬಂದು ನಂತರ ಆಂಬುಲೆನ್ಸ್ ಮುಖಾಂತರ ಪಟ್ಟಣದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.