ಹಾಸನ: ಸಚಿವ ಸಂಪುಟ ಸಭೆಯಲ್ಲಿ ಬೇಲೂರು ಅರಸೀಕೆರೆ ತಾಲ್ಲೂಕಿಗೆ ಜಲಜೀವನ ಮಿಷನ್ ಅಡಿ ಕುಡಿಯುವ ನೀರು ಯೋಜನೆಗೆ ಅನುಮೋದನೆಯನ್ನು ನೀಡಲಾಗಿದೆ. ಬೇಲೂರಿನ ಅಭಿವೃದ್ಧಿಗೆ ಸರ್ಕಾರ ಬಹಳ ದೊಡ್ಡ ಕಾಣಿಕೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಭಾಗವಹಿಸಿ ಮಾತನಾಡಿದರು.
ಹಳೇಬೀಡು ಮಾದಳ್ಳಿ ಏತ ನೀರಾವರಿ ಯೋಜನೆ ಪ್ರಾರಂಭಿಸಿದ್ದು ಬಿಎಸ್ ವೈ ಅವಧಿಯಲ್ಲಿ , ಈ ಕೆರೆ ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಬರಗಾಲ ಪೀಡಿತ ಪ್ರದೇಶಕ್ಕೆ ನೀರು ಒದಗಿಸುವ ಕೆಲಸ ಮಾಡಲಾಗಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಿ, ರಣಘಟ್ಟ ಯೋಜನೆಯನ್ನು 190 ಕೋಟಿ ರೂ. ಅನುದಾನ ನೀಡಿ, ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ತಾಲ್ಲೂಕಿನ ರಸ್ತೆ, ನೀರಾವರಿ ಒದಿಸಲಾಗಿದೆ. 1800 ಕೋಟಿ ರೂ. ಕಳೆದ ಮೂರು ವರ್ಷದಲ್ಲಿ ನೀಡಿ, ಯೋಜನೆ ಅನುಷ್ಠಾನಗೊಳಿಸಲಾಗಿದೆ. ಹಾಸನದ ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳು ಹಾಗೂ ಹೇಮಾವತಿ ನದಿಯಿಂದಲೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವ ನಿರ್ಣಯ ನಮ್ಮ ಸರ್ಕಾರದ್ದು ಎಂದರು.
ಬೇಲೂರು-ಹಳೆಬೀಡು ವಿಶ್ವ ಪಾರಂಪರಿಕ ತಾಣ :
ಬೇಲೂರು-ಹಳೆಬೀಡು ವಿಶ್ವ ಪಾರಂಪರಿಕ ತಾಣವಾಗಿದ್ದು, ಯುನೆಸ್ಕೋ ದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲು ವಿಶೇಷ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಯುನೆಸ್ಕೋ ನಿಂದ ಗುರುತಿಸಲ್ಪಟ್ಟ ಪ್ರವಾಸಿ ತಾಣವಾಗಲಿದೆ. ಇದರಿಂದ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೊಂಡು, ತನ್ಮೂಲಕ ಬೇಲೂರಿನ ಸಮಗ್ರ ಅಭಿವೃದ್ಧಿ ಆಗಲಿದೆ ಎಂದರು.
ಅಡಿಕೆ ಸಂಶೋಧನಾ ಕೇಂದ್ರಕ್ಕೆ 25 ಕೋಟಿ ರೂ.:
ಇಲ್ಲಿನ ಕಾಫಿ ಬೆಳೆಗಾರರ ಭೂಮಿಯ ಬಗ್ಗೆ ಆತಂಕವಿತ್ತು. ಬೆಳೆಗಾರರಿಗೆ ಭೂಮಿಯನ್ನು ಲೀಸ್ ಮೇಲೆ ನೀಡಲು ಅಧಿಸೂಚನೆ ನೀಡಿ ಕಾನೂನು ರೂಪಿಸಲಾಗುತ್ತಿದ್ದು, ಹಲವು ಕಾಫಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಅಡಿಕೆ ಬೆಳೆಗಾರರಿಗೆ ಬಿಳಿಚುಕ್ಕೆ ರೋಗ ಬಂದಾಗ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಅಡಿಕೆ ಬಗ್ಗೆ ಸಂಶೋಧನೆ ನಡೆಸಲು ಅಡಿಕೆ ಸಂಶೋಧನಾ ಕೇಂದ್ರಕ್ಕೆ 25 ಕೋಟಿ ರೂ.ಗಳ ಅನುದಾನ ಮೀಸಲಿರಿಸಿದೆ ಎಂದರು.
638 ಕೋಟಿ ರೂ. ವೆಚ್ಚದಲ್ಲಿ ರೈತರಿಂದ ರಾಗಿ ಖರೀದಿ :
ಹಾಸನದಲ್ಲಿ ರಾಗಿ ಬೆಳೆಯುವ ರೈತರಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿ ರಾಗಿ ವಿತರಿಸಲು ರಾಗಿ ಖರೀದಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರದಿಂದ 3200 ರೂ. ಎಂಎಸ್ ಪಿ ನೀಡಲಾಯಿತು.ರೈತರ ಒತ್ತಾಸೆಯ ಮೇರೆಗೆ ಮೊದಲ ಹಂತದಲ್ಲಿ 1.5 ಲಕ್ಷ ಟನ್, 3 ಲಕ್ಷ ಟನ್ ನಂತರ 5.5 ಲಕ್ಷ ಟನ್ ರಾಗಿಯನ್ನು ಸರ್ಕಾರದಿಂದ ಖರೀದಿಸಲಾಗಿದೆ. ಈ ಖರೀದಿಗೆ ಸರ್ಕಾರಕ್ಕೆ 638 ಕೋಟಿ ರೂ. ವೆಚ್ಚವಾಗಿದ್ದು, ರಾಗಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗಿದೆ. ಇದೊಂದು ದಾಖಲೆಯ ಕಾರ್ಯಕ್ರಮ ಎಂದರು.
ರೈತರ ಕಲ್ಯಾಣಕ್ಕಾಗಿ ಸರ್ಕಾರ ಕಟಿಬದ್ಧ :
ಸರ್ಕಾರದಿಂದ ಈ ಭಾಗದಲ್ಲಿ ನೀರಾವರಿ, ಕುಡಿಯುವ ನೀರು, ರಸ್ತೆ, ಕಾಫಿ ,ಅಡಿಕೆ, ರಾಗಿ ಬೆಳೆಯುವ ರೈತರಿಗೆ ಕಲ್ಪಿಸಿರುವ ಅನುಕೂಲತೆಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡಬೇಕು. ಜಾತಿ ಮತ ಪಂಥಗಳನ್ನು ನೆನೆಯದೇ, ಸಂಕಷ್ಟದಲ್ಲಿರುವವರಿಗೆ ಸಹಾಯ ಒದಗಿಸುವ ಭಾಜಪ ಸರ್ಕಾರಕ್ಕೆ ಜನತೆಯೇ ಪರಿವಾರ. ಈ ನಾಡಿನ ಪ್ರತಿ ಮನೆಗೆ ಸರ್ಕಾರದ ಯೋಜನೆಗಳು ತಲುಪಬೇಕು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ,ಆವಾಸ್ ಯೋಜನೆ, ಉಜ್ವಲ ಯೋಜನೆ, ಸ್ವಚ್ಛಭಾರತ ಯೋಜನೆ ತರಲಾಗಿದೆ. 2.37 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಸಲಾಗಿದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ರೈತರಿಗೆ ನೀಡಲಾಗುವ ಸಾಲವನ್ನು 3 ಲಕ್ಷದಿಂದ 5 ಲಕ್ಷ ರೂಗಳಿಗೆ ಏರಿಸಲಾಗಿದೆ. ರೈತರ ಕಲ್ಯಾಣಕ್ಕಾಗಿ ಸರ್ಕಾರ ಕಟಿಬದ್ಧವಾಗಿದೆ ಎಂದರು.
ಸುಳ್ಳಿನ ಸುಳಿಯಲ್ಲಿ ಕಾಂಗ್ರೆಸ್ ಪಕ್ಷ:
ಕಾಂಗ್ರೆಸ್ ನವರ ಬೂಟಾಟಿಕೆ ಮಾತು, ಸುಳ್ಳು ಹೇಳುವ ಚಾಳಿಯಿಂದ ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಕಾಲದ ಭ್ರಷ್ಟಾಚಾರಗಳನ್ನು. ಜಾತಿಗಳನ್ನು ಒಡೆಯುವ ಕೆಲಸವನ್ನು ಮಾಡಿದ್ದಾರೆ. ಭ್ರಷ್ಟ ಕಾಂಗ್ರೆಸ್ ನ್ನು ಶಾಶ್ವತವಾಗಿ ಜನರು ಮನೆಗೆ ಕಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಭಾಗವಹಿಸಿ ಮಾತನಾಡಿದರು.
ಹಾಸನ ಬಹಳ ವರ್ಷಗಳಿಂದ ಒಂದೇ ಪಕ್ಷದ ಹಿಡಿತದಲ್ಲಿದ್ದು, ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. 3 ವರ್ಷಗಳಿಂದ ಭಾಜಪ ಸರ್ಕಾರದ ಆಡಳಿತವನ್ನು ಜನರು ನೋಡಿದ್ದಾರೆ. ಹಲವು ವರ್ಷಗಳ ಸಮಸ್ಯೆಗಳನ್ನು ಕಗ್ಗಂಟಾಗಿಸಿ, ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸಲಾಗಿತ್ತು. ಈ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕಿದೆ. ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿಣ ಹಿಡಲಿರುವ ವಿಶ್ವಾಸ ನಮಗಿದೆ ಎಂದರು.
ಭಾಜಪ- ವಿಶ್ವದ ಅತಿ ದೊಡ್ಡ ಪಕ್ಷ:
ನಮ್ಮ ಸರ್ಕಾರ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ನೀಡಿ, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಪ್ರಗತಿಯಲ್ಲಿರಿಸಲಾಗಿದೆ. ಭಾಜಪ ಪಕ್ಷ , ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ವಿಶ್ವದಲ್ಲಿರುವ ಅತಿ ದೊಡ್ಡ ಪಕ್ಷ, ದೊಡ್ಡ ಸಂಘಟಿತ ಪಕ್ಷವಾಗಿದೆ. ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಪಕ್ಷದ ಧ್ಯೇಯಗಳನ್ನು ಪ್ರತಿಪಾದಿಸಿ, ದೇಶದಲ್ಲಿ ಸದೃಢವಾದಂತಹ ರಾಜಕೀಯ ವಾತಾವರಣವನ್ನು ಮೂಡಿಸಲು ಭಾಜಪ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸಿ.ಟಿ.ರವಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಗೋಪಾಲಯ್ಯ ಮತ್ತಿತರರು ಹಾಜರಿದ್ದರು.