ಬೇಲೂರು: ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಹಾಗೂ ೯೪ ಸಿ ಯಲ್ಲಿ ಹಕ್ಕುಪತ್ರ ನೀಡದ ತಾಲೂಕು ಆಡಳಿತದ ವಿರುದ್ಧ ಹಾಗೂ ಶಾಸಕರ ವಿರುದ್ಧ ರೈತಸಂಘದ ವತಿಯಿಂದ ಪ್ರತಿಭಟಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಮಾತ ನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಭೋಗಮಲ್ಲೇಶ್ ತಾಲೂಕಿನ ಯಗಡಿಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ ೪೬ ರಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಕುಟುಂಬಗಳು ೩೦ ವರ್ಷಗಳಿಂದ ವಾಸವಿದ್ದು ಅವರಿಗೆ ಇಲ್ಲಿವರೆಗೂ ೯೪-ಸಿ ನಲ್ಲಿ ಹಕ್ಕುಪತ್ರವನ್ನು ಕೊಟ್ಟಿಲ್ಲ. ಇಲ್ಲಿವರೆಗೂ ಶಾಸಕರ ಕಚೇರಿ ತಾಲೂಕು ಆಡಳಿತ ,ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದರೂ ಸಹ ಇದರ ಬಗ್ಗೆ ಯಾವುದೇ ರೀತಿಯಲ್ಲಿ ಗಮನ ಹರಿಸುತ್ತಿಲ್ಲ.೫೦-೫೩ ನಲ್ಲಿ ಬಗರ್ ಹುಕುಂ ಸಾಗುವಳಿ ದಾರರಿಗೆ ಹಲವಾರು ಕಮಿಟಿ ಸಭೆ ನಡೆದರೂ ಸಾಗುವಳಿ ದಾರರಿಗೆ ಹಕ್ಕು ಪತ್ರ ಹಾಗೂ ಖಾತೆ ಮಾಡಿಕೊಡಲು ಇಲ್ಲಿಯ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನೇರ ಹೊಣೆ ಶಾಸಕರದ್ದು ಅದ್ದರಿಂದ ಇನ್ನೊಂದು ವಾರದಲ್ಲಿ ಅವರಿಗೆ ಹಕ್ಕುಪತ್ರ ವಿತರಣೆಯಾಗದಿದ್ದರೆ ತಾಲೂಕು ಕಚೇರಿ ಮುಂಭಾಗದಲ್ಲಿ ಅಹೊರಾತ್ರಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ ಇತ್ತೀಚೆಗೆ ರೈತರ ಮೇಲೆ ಅಧಿಕಾರಿಗಳ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗಿದ್ದು,ರೈತರನ್ನು ಕೇವಲ ಹಣಕ್ಕಾಗಿ ಪೀಡಿಸುವುದಲ್ಲದೆ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೂಲಿ ಕಾರ್ಮಿಕರು ತಮ್ಮ ಹಕ್ಕು ಪತ್ರಕ್ಕಾಗಿ ಅಲೆಯುತ್ತಿದ್ದರೆ ಇನ್ನು ಸಾಗುವಳಿದಾರರು ಸಾಗುವಳಿ ಚೀಟಿಗಾಗಿ ಅಲೆದಾಡುತ್ತಿದ್ದಾರೆ.
ಅಲ್ಲದೆ ತಾಲೂಕಿನಾದ್ಯಂತ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಸಾಧ್ಯವಾಗದೆ ರೈತರ ಹದ್ದುಬಸ್ತು ದುರಸ್ಥಿಗಾಗಿ ಸಾವಿರಾರು ರೂಗಳ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ರೈತ ಬೆಳೆ ಮಾರುವುದಕ್ಕಿಂತ ಮುಂಚಿತವಾಗಿ ಸವಲತ್ತುಗಳನ್ನು ನೀಡದೆ ಬೆಳೆ ಮಾಡಿ ನಂತರ ಸವಲತ್ತುಗಳನ್ನು ಕೊಡುವುದಾಗಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದು ಇಲ್ಲಿವರೆಗೂ ಸತತ ಮೂರು ವರ್ಷಗಳಿಂದ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಇಂದ ಯಾವುದೇ ಸಹಾಯ ಧನ ನೀಡದೆ ರೈತರನ್ನು ಸತಾಯಿಸುತ್ತಿದ್ದು ಇದರ ಬಗ್ಗೆ ಗಮನ ಹರಿಸದ ಶಾಸಕರು ಹಾಗೂ ಅರೇಹಳ್ಳಿ ಹೋಬಳಿಯ ಹೆಗ್ಗಡಿಹಳ್ಳಿ ಗ್ರಾಮದ ಸುಮಾರು ೪೦ ಕುಟುಂಬಗಳಿಗೆ ಹಕ್ಕುಪತ್ರ ನೀಡದೆ ಇರುವ ಇಂತಹವರ ವಿರುದ್ಧ ಉಗ್ರ ರೀತಿಯಲ್ಲಿ ಪ್ರತಿಭಟಿಸುವುದಲ್ಲದೆ ಮುಂದಿನ ಅವರ ಚುನಾವಣೆಯನ್ನು ಆ ಗ್ರಾಮಸ್ಥರ ನೇತೃತ್ವದಲ್ಲಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ರೈತ ಸಂಘದ ಬಸವರಾಜ್,ಚಂದ್ರಶೇಖರ್,ಧರ್ಮೇಗೌಡ, ಮಲ್ಲಿಕಾರ್ಜುನ, ಕುಮಾರಣ್ಣ, ದೇವೇಗೌಡ,ಪರಮೇಶ್,ಗಂಗೇಗೌಡ ಇತರರು ಹಾಜರಿದ್ದರು.