ಹಾಸನ: ಮಂಡ್ಯ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಜೆಡಿಎಸ್ ತಳಮಳ ಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಂಡ್ಯಗೆ ಬಂದ ತಕ್ಷಣ ದಳಪತಿಗಳಲ್ಲಿ ತಳಮಳ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ನಮಗೆ ನರೇಂದ್ರ ಮೋದಿ ಬಂದಿದ್ದು ಗೊತ್ತಿಲ್ಲ…! ಹೋಗಿದ್ದು ಗೊತ್ತಿಲ್ಲ..!! ಎಂದು ಟೀಕಿಸಿದರು.
ಮೋದಿಯವರು ಇನ್ನೂ ೧೦ ಬಾರಿ ಮಂಡ್ಯ, ಅಲ್ಲದೆ ಎಲ್ಲಿಗೆ ಬಂದರೂ ನಮಗೆ ಅದರ ಚಿಂತೆ ಇಲ್ಲ ಮೋದಿ ಅವರು ತಾತ್ಕಾಲಿಕವಾಗಿ ಮಾತಿನಲ್ಲಿ ಖುಷಿ ಪಡಿಸಲಿಕ್ಕೆ ಹೋದರು ಜನರು ಅವರ ಮಾತಿಗೆ ಈಗ ಮರುಳಾಗುವ ದಿನಗಳು ಉಳಿದಿಲ್ಲ, ಆದ್ದರಿಂದ ಯಾವುದೇ ತಳಮಳವು ಇಲ್ಲ ಜನತಾದಳಕ್ಕೆ ಭೀತಿಯು ಇಲ್ಲ ಎಂದು ತಿಳಿಸಿದರು.
ನಾವು ಇಂದು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುವ ನೈತಿಕ ಶಕ್ತಿಯನ್ನು ಉಳಿಸಿಕೊಂಡಿದ್ದೇವೆ. ಇದನ್ನೇ ಮುಂದುವರೆಸುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಜೆಡಿಎಸ್ ಬಗ್ಗೆ ಮಾತನಾಡದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಜೆಡಿಎಸ್ ಬಗ್ಗೆ ಮಾತನಾಡಲು ಅವರ ಬಳಿ ಯಾವುದೇ ವಿಷಯವೂ ಇಲ್ಲ.., ಅವರ ಬಳಿ ಸರಕು ಇಲ್ಲದೇ ಇರುವುದರಿಂದ ಜೆಡಿಎಸ್ ಬಗ್ಗೆ ಮಾತನಾಡಲು ಆಗಿಲ್ಲ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಯಾವುದೇ ವಿಷಯವಿಲ್ಲ ನಾನು ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಮಂಡ್ಯ ಜಿಲ್ಲೆಗೆ ಹಲವಾರು ಯೋಜನೆಯನ್ನು ಕೊಟ್ಟಿದ್ದೆ, ಬಿಜೆಪಿ ನಾಯಕರು ಮಂಡ್ಯ ಬಜೆಟ್ ಅಂತ ಹಾಸ್ಯ ಮಾಡಿದರು. ಕೊಟ್ಟಂತಹ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದರು ಆ ಸತ್ಯ ಹೇಳಲು ಸಾಧ್ಯವಿಲ್ಲ ಆದ್ದರಿಂದ ಜೆಡಿಎಸ್ ವಿರುದ್ಧ ಏನನ್ನು ಅವರು ಮಾತನಾಡಿಲ್ಲ ಎಂದರು.
ಪ್ರಧಾನ ಮಂತ್ರಿ ಫೈಟರ್ ರವಿ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಓರ್ವ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರಿಗೆ ಕಾನೂನು ಬಾಹಿರ ಚಟುವಟಿಕೆ ನಡೆಸುವ ಅಂಡರ್ವರ್ಲ್ಡ್ ಡಾನ್ ಗಳಿಗೆ ಪ್ರಧಾನಮಂತ್ರಿ ತಲೆಬಾಗಿ ಕೈ ಮುಗಿಯುವ ದೃಶ್ಯ ನೋಡಿದಾಗ ಕರ್ನಾಟಕದಲ್ಲಿ ಬಿಜೆಪಿಯ ಸ್ಥಿತಿ ಯಾವ ದಯನೀಯ ಅವಸ್ಥೆಯಲ್ಲಿ ಇದೆ ಎಂದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಸುಮಲತಾ ಅವರು ನರೇಂದ್ರ ಮೋದಿ ಅವರಿಗೆ ಮಂಡ್ಯದ ಬೆಲ್ಲ ನೀಡಿ ಅಭಿನಂದಿಸಿದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರಧಾನ ಮಂತ್ರಿಗಳು ಮಂಡ್ಯಬೆಲ್ಲದ ಸವಿ ನೋಡಿಯಾದರೂ ಜಿಲ್ಲೆಗೆ ಒಳ್ಳೆಯ ಕಾರ್ಯಕ್ರಮವನ್ನು ನೀಡಲಿ ಎಂದು ಹೇಳಿದರು.