ಹಾಸನ: ಪಂಚರತ್ನ ರಥಯಾತ್ರೆ ವೇಳೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಕಡೆ ಜೆಡಿಎಸ್ ಖಾತೆ ತೆರೆಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಡುತ್ತಿದ್ದು ಚುನಾವಣೆ ದಿನಾಂಕ ಘೋಷಣೆ ಸಮೀಪವಾಗುತ್ತಿದೆ. ಎಲ್ಲರ ನಿರೀಕ್ಷೆಯಂತೆ ಪಕ್ಷ ಉತ್ತಮ ಸ್ಥಾನವನ್ನು ಪಡೆಯಲಿದ್ದು ಪ್ರಥಮ ಬಾರಿಗೆ ಯಾವುದೇ ಭಾಗಕ್ಕೆ ಹೋದರು ಜಾತಿ ಮರೆತು ಜನರ ಬೆಂಬಲ ಕಾಣುತ್ತಿದ್ದೇನೆ .ಆದ್ದರಿಂದ ಈ ಬಾರಿ ಜೆಡಿಎಸ್ ಉತ್ತಮ ಫಲಿತಾಂಶ ಪಡೆಯಲಿದೆ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ಗೆ ಎರಡು ಮೂರು ಜಿಲ್ಲೆ ಎನ್ನುತ್ತಿದ್ದರು ಆದರೆ ಇತರೆ ಜಿಲ್ಲೆಗಳಲ್ಲಿಯೂ ಜೆಡಿಎಸ್ ಖಾತೆ ತೆರೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ದರಿಂದ ನಕಲಿ ಸಮೀಕ್ಷೆಗಳ ಮುಖಾಂತರ ಆ ಪಕ್ಷದ ಸಂಖ್ಯೆ ಏರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದು ಸಾರ್ವಜನಿಕರು ಇದರಿಂದ ವಿಚಲಿತ ರಾಗದೆ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ೩೦ರಿಂದ ೪೦ ಹಳ್ಳಿಗಳು ಭೇಟಿ ಮಾಡುತ್ತಿದ್ದು ಎಲ್ಲೆಡೆ ಜೆಡಿಎಸ್ ಪಕ್ಷದ ಪರವಾಗಿ ಬೆಂಬಲ ಕಾಣುತ್ತಿದೆ. ಡಬಲ್ ಇಂಜಿನ್ ಸರ್ಕಾರ ರೈತರ ನೆರವಿಗೆ ಬಾರದಿರುವುದು ಬಹಳ ದೊಡ್ಡ ಪರಿಣಾಮ ಬೀರಿದ್ದು ೨೦೨೪ಕ್ಕೆ ಘೋಷಣೆ ಮಾಡಿಕೊಂಡಿ ರುವ ರಾಜ್ಯ ಬಜೆಟ್ ಜಾಹೀರಾತಿನಲ್ಲೇ ಉಳಿಯಲಿದೆ ಎಂದು ಟೀಕಿಸಿದರು.
ಬಜೆಟ್ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದು ಮುಂದಿನ ಚುನಾವಣೆಯಲ್ಲಿ ಏನು ಫಲಿತಾಂಶ ಬರುತ್ತದೆ ಅದರ ಆಧಾರದ ಮೇಲೆ ಬಜೆಟ್ಗೆ ಮಹತ್ವ ಬರಲಿದೆ ಅದಕ್ಕೆ ಬಿಜೆಪಿಗೆ ಸಂಪೂರ್ಣ ಬಹುಮತ ಬರಬೇಕಿದ್ದು ಇದೀಗ ಜಾಹೀರಾತು ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸಾರ್ವಜನಿಕರ ದುಡ್ಡನ್ನು ಸ್ವೇಚ್ಛಾಚಾರವಾಗಿ ಖರ್ಚು ಮಾಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳು ಆಂತರಿಕ ಬೆಳವಣಿಗೆ ಯಿಂದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗುರಿ ಮುಟ್ಟಲು ಸಹಕಾರಿಯಾಗುತ್ತಿದೆ ಎಂದರು.
೧೦ ದಿನದಲ್ಲಿ ಜೆಡಿಎಸ್ ಪಟ್ಟಿ
ಜೆಡಿಎಸ್ ಪಟ್ಟಿ ಬಿಡುಗಡೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು ಇನ್ನೂ ಸಹ ನೂರು ಕ್ಷೇತ್ರಗಳ ಪಟ್ಟಿ ಅಂತಿಮಗೊಳಿಸಲು ಸದ್ಯದಲ್ಲೇ ಕುಳಿತು ತೀರ್ಮಾನ ಕೈಗೊಳ್ಳಲಿದ್ದೇವೆ. ಇನ್ನೊಂದು ವಾರ ಅಥವಾ ೧೦ ದಿನದಲ್ಲಿ ಅಂತಿಮ ತೆರೆ ಎಳೆಯಬೇಕಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿ ಘೋಷಣೆ ಮಾಡಲು ದೇವೇಗೌಡರು ಸಮರ್ಥರಿದ್ದಾರೆ ಎಂದರು .
ಉರಿ ಗೌಡ ನಂಜೇಗೌಡ ವಿಚಾರವಾಗಿ ಸಚಿವ ಮುನಿರತ್ನ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಸಿನಿಮಾ ತೆಗಿಯಲಿಕ್ಕೆ ಯಾರ ಕೈಲಾದರೂ ಸಂಶೋಧನೆ ಮಾಡಿಸಿಕೊಂಡಿರಬೇಕು ಕಾಲ್ಪನಿಕ ಕಥೆ ಅಂತ ಸಿನಿಮಾ ಮಾಡ್ತಿವಲ್ಲ ಅದೇ ರೀತಿ ಅವರು ಸಿನಿಮಾ ಮಾಡಲು ಕಾಲ್ಪನಿಕ ಕಥೆಯ ಅಶೋಕ, ಅಶ್ವಥ್ ನಾರಾಯಣ್ಗೆ ಹೇಳಿ ಸಂಭಾಷಣೆ ಮತ್ತು ಸ್ಕ್ರಿಪ್ಟ್ ಸಿದ್ಧಪಡಿಸಿರಬೇಕು ಎಂದು ಲೇವಡಿ ಮಾಡಿದರು.
ಈ ವೇಳೆ ಮಾಜಿ ಸಚಿವ ಎ.ಮಂಜು, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಹೊಳೆ ನರಸೀಪುರ ತಾಲೂಕು ಅಧ್ಯಕ್ಷ ಪುಟ್ಟಸೋಮಪ್ಪ , ಅರಕಲಗೂಡು ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ , ಮುಖಂಡರಾದ ಡಾ.ಮೋಹನ್ , ರಮೇಶ್ ಇತರರು ಉಪಸ್ಥಿತರಿದ್ದರು.