ಅರಸೀಕೆರೆ: ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಬ್ಬರಿ ಬೆಳೆಗಾರರ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರ ನಾಫೇಡ್ ಕೊಬ್ಬರಿ ಧಾರಣೆಯನ್ನು 20 ಸಾವಿರಕ್ಕೆ ಏರಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಎ.ಪಿ.ಎಂ.ಸಿ ಅಧಿಕಾರಿ ಶೀಲಾ ಅವರಿಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ಎಪಿಎಂಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು . ನಗರದ ಬಸವೇಶ್ವರ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ಚಳುವಳಿ ನಡೆಸಿದರು.ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ರೈತ ಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನ ಕುಮಾರ್ ಮಾತನಾಡಿ ಕಳೆದ 6ತಿಂಗಳ ಹಿಂದೆ 19ಸಾವಿರ ಹಾಸುಪಾಸಿನಲ್ಲಿದ್ದ ಕೊಬ್ಬರಿ ಧಾರಣೆ ಈಗ 9800 ಕ್ಕೆ ಇಳಿದಿದ್ದು ನಾಫೇಡ್ ಕೊಬ್ಬರಿ ಧಾರಣೆ 11,700 ಇದ್ದು ಈ ಬೆಲೆ ಏನೇನು ಸಾಲದಾಗಿದ್ದು ಮಳೆಯ ಅಭಾವ ಅಂತರ್ಜಲ ಕುಸಿತದಿಂದ ಕಳೆದ ವರ್ಷ 6ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸುಳಿ ಬಿದ್ದು ನಾಶವಾಗಿ ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದ್ದು ಅಳೆದು ಉಳಿದಿರುವ ತೆಂಗನ್ನೆ ನಂಬಿ ಬದುಕುತ್ತಿರುವ ರೈತರು ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಲಾದರೂ ಹೆಚ್ಚೇತ್ತು ಬೆಳೆಗಾರರ ಸಂಕಷ್ಟಕ್ಕೆ ಸ್ಪಂಽಸಿ 20ಸಾವಿರಕ್ಕೆ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಯಾವುದೇ ಪಕ್ಷಗಳು ರೈತರ ಸಂಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡುತ್ತಿಲ್ಲ ಇದನ್ನು ರೈತ ಬೀದಿಗಿಳಿದು ಪ್ರಶ್ನೆ ಮಾಡಬೇಕು ಚುನಾವಣೆ ಹತ್ತಿರಕ್ಕೆ ಬಂದಿದ್ದು ಹಸಿರು ಟವಲ್ ಹಾಕಿಕೊಂಡು ಮತ ಕೇಳಲು ಬಂದವರಿಗೆ ಓಟು ಹಾಕುತ್ತೀರಿ ಗೆದ್ದು ಹೋದ ಅವರು ನಿಮ್ಮ ಕಡೆ ತಿರುಗಿಯೂ ನೊಡುವುದಿಲ್ಲ ಜೆ.ಡಿ.ಎಸ್ ,ಕಾಂಗ್ರೇಸ್ ,ಬಿ.ಜೆ.ಪಿ ಒಂದೇ ನಾಣ್ಯದ 3 ಮುಖಗಳು ರೈತರನ್ನು ತುಳಿದು ಐಶಾರಾಮಿ ಜೀವನ ನಡೆಸುತ್ತಿರುವ ರಾಜಕಾರಣಿಗಳು ಎಂದಿಗೂ ರೈತರ ಪರ ನಿಲ್ಲುವುದೇ ಇಲ್ಲ ಬರುವ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಇಂತಹವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.
ರೈತರಾದ ಕೆಲ್ಲಂಗೆರೆ ಬಾಬು ಹಾಗೂ ಬಸವರಾಜ್ ಮಾತನಾಡಿ ನಾಫೇಡ್‌ಗೆ ಕೊಬ್ಬರಿ ಬಿಟ್ಟರೆ ಇವರ ಬಳಿ ತೂಕ ಮಾಡುವ ಯಾವುದೇ ಸಲಕರಣೆಗಳು ಇಲ್ಲ ,ರೈತರೇ ಕಾಡಿಬೇಡಿ ಯಾರಿಂದಲಾದರೂ ತೂಕ ಮಾಡುವ ಯಂತ್ರವನ್ನು ತಂದುಕೊಡಬೇಕಾಗಿದೆ ಮತ್ತು ಖಾಲಿ ಚೀಲದಿಂದ ಹಿಡಿದು ಕೊಬ್ಬರಿ ಗುಣಮಟ್ಟವನ್ನು ಪರೀಕ್ಷಿಸುವವರೆಗೆ ಹಾಗೂ ಲಾರಿಗೆ ಲೋಡ್ ಮಾಡುವವರೆಗೆ ಎಲ್ಲಾ ವೆಚ್ಚವನ್ನು ರೈತರೆ ಬರಿಸಬೇಕಾಗಿದೆ .ಅಲ್ಲದೆ ಉತ್ತಮ ಕೊಬ್ಬರಿಯನ್ನೆ 1ಕ್ವಿಂಟಾಲ್ ಕೊಬ್ಬರಿಯಲ್ಲಿ ಸುಮಾರು 20ಕೆ.ಜಿ ಕೊಬ್ಬರಿಯನ್ನೆ ತಿರಸ್ಕರಿಸಿ ರೈತರಿಗೆ ನಷ್ಟ ಉಂಟುಮಾಡುತ್ತಿದ್ದಾರೆ . ನಾಫೇಡ್ ಅಧಿಕಾರಿಗಳನ್ನು ಗಮನಿಸುವವರಿಗೆ ಯಾವುದೇ ಗ್ರೇಡ್ ತಿರಸ್ಕಾರವಿಲ್ಲದೆ ಸಮಯ ಎಷ್ಟಾದರೂ ಕೊಬ್ಬರಿ ಖರಿದಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಟಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಗೌರವ ಅಧ್ಯಕ್ಷ ಜವೇನಹಳ್ಳಿ ನಿಂಗಪ್ಪ , ಜಿಲ್ಲಾ ಸಂಚಾಲಕ ಅಯ್ಯೂಬ್ ಪಾಶ, ಜಿಲ್ಲಾ ಕಾರ್ಯಧ್ಯಕ್ಷ ಎಜಾಜ್ ಪಾಷಾ, ಮೊಹಮ್ಮದ್ ದಸ್ತಗೀರ್, ಕಾನೂನು ಸಲಹೆಗಾರರಾದ ವಕೀಲ ವೆಂಕಟೇಶ್ ,ಶಾಂತಮ್ಮ,ರಂಗಸ್ವಾಮಣ್ಣ ,ಹನುಮಂತು ,ರಾಮಚಂದ್ರ, ಸೋಮಣ್ಣ,ಶಾಂತಕುಮಾರ್, ಚಂದ್ರಪ್ಪ,ರಮೇಶ್ ,ತಿಮ್ಮಪ್ಪ ಹಾಗೂ ಸೇರಿದಂತೆ ನೂರಾರು ರೈತರು ಭಾಗವಸಿದ್ದರು.