ಮಡಿಕೇರಿ: ಇತ್ತೀಚೆಗೆ ಮೊಹಮದ್ ಅಶ್ವಾಕ್ ಎಂಬಾತ ಕೊಡಗಿನ ಕುಲಮಾತೆ ಕಾವೇರಿ ಹಾಗೂ ಕೊಡವ ಹೆಣ್ಣು ಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ಖಂಡನೀಯವೆಂದು ತಿಳಿಸಿರುವ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ಸೌಹಾರ್ದತೆಗೆ ದಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ ಹಿಂದೂ ಹಾಗೂ ಮುಸಲ್ಮಾನರು ಅತ್ಯಂತ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಸೌಹಾರ್ದತೆಗೆ ಧಕ್ಕೆ ತರುವ ವಾತಾವರಣವನ್ನು ಕೆಲವರು ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಹಮದ್ ಅಶ್ವಾಕ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಅವಮಾನ ಕೇವಲ ಕೊಡವ ಧಾರ್ಮಿಕ ಪರಂಪರೆಗೆ ಮತ್ತು ಹೆಣ್ಣು ಮಕ್ಕಳಿಗಲ್ಲ. ಇದು ಇಡೀ ಭಾರತೀಯತೆಗೆ ಎಸಗಿರುವ ಅವಮಾನ ಮತ್ತು ದ್ರೋಹವಾಗಿದೆ. ಕೊಡವ ಸಂಸ್ಕøತಿ, ಧಾರ್ಮಿಕ ಪರಂಪರೆ ಕೇವಲ ಕೊಡಗಿಗೆ ಮಾತ್ರ ಸೀಮಿತವಲ್ಲ. ಭಾರತ ದೇಶ ಮತ್ತು ವಿಶ್ವದ ಸನಾತನ ಸಂಸ್ಕøತಿ ಮತ್ತು ಧಾರ್ಮಿಕತೆಯ ಭಾಗವಾಗಿದೆ.
ವಿಶ್ವದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನ್ಮತಾಳಿದ ಧರ್ಮಗಳಿಗಿಂತಲೂ ಮುನ್ನ ವೇದೋಪನಿಷತ್ ಗಳಲ್ಲಿ ಉಲ್ಲೇಖವಾಗಿರುವ ಸನಾತನ ಹಿಂದೂ ಸಂಸ್ಕøತಿಯ ಭಾಗವಾಗಿ ಕೊಡವ ಆಚಾರ, ಸಂಸ್ಕಾರ, ಸಂಸ್ಕøತಿ ಮತ್ತು ಪರಂಪರೆ ಇದೆ. ಭಾರತೀಯತೆಯ ಮುಕುಟವಾಗಿರುವ ಕೊಡವ ಧಾರ್ಮಿಕತೆ, ಕ್ಷೇತ್ರ ಮಹಿಮೆ ಮತ್ತು ಮಹಿಳೆಯರನ್ನು ಅವಹೇಳನ ಮಾಡುವ ಮೂಲಕ ಸಮಸ್ತ ಹಿಂದೂಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಹಿಂದೂ- ಮುಸ್ಲಿಂ ಸೌಹಾರ್ದತೆಗೆ ದಕ್ಕೆ ತರುತ್ತಿರುವ ಕಿಡಿಗೇಡಿಗಳ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಕಾವೇರಿ ಮಾತೆಗೆ ಹಾಗೂ ಕೊಡವ ಮಹಿಳೆಗೆ ಅವಮಾನ ಮಾಡಿದ ಪ್ರಕರಣವನ್ನು ಮುಸ್ಲಿಮರೂ ಕೂಡ ಖಂಡಿಸುವ ಮೂಲಕ ಸೌಹಾರ್ದತೆಯ ಬಲವನ್ನು ಹೆಚ್ಚಿಸಬೇಕಾಗಿದೆ ಎಂದು ಶಿವಕುಮಾರ್ ನಾಣಯ್ಯ ಹೇಳಿದ್ದಾರೆ.
ಅವಹೇಳನ ಮಾಡಿದ ಆರೋಪಿ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.