ಮಡಿಕೇರಿ: ಜಿಲ್ಲೆಯಲ್ಲಿರುವ 13ಕ್ಕೂ ಹೆಚ್ಚು ತುಳು ಭಾಷಿಕ ಸಮುದಾಯದ ಶ್ರೇಯೋಭಿವೃದ್ಧಿಗೆ ಕೊಡಗು ಜಿಲ್ಲಾ ತುಳುವೆರ ಜನಪದ ಕೂಟವನ್ನು ಬಲಪಡಿಸಲು ಸರ್ವರು ಕೈಜೊಡಿಸಬೇಕೆಂದು ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ಕರೆ ನೀಡಿದ್ದಾರೆ.
ವಿರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಲ್ಲಾ ತುಳು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ತುಳು ಸಂಸ್ಕತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವುದು ಕೂಟದ ಉದ್ದೇಶವಾಗಿದೆ ಎಂದರು.
ತುಳು ಭಾಷಿಕರ ಶ್ರೇಯೋಭಿವೃದ್ಧಿಗಾಗಿ ಕೂಟ ನಡೆಸುವ ಕಾರ್ಯಕ್ರಮಗಳಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.ಜಿಲ್ಲಾ ಉಪಾಧ್ಯಕ್ಷ ಬಿ.ವೈ.ಆನಂದರಘು ಮಾತನಾಡಿ, ಹೋಬಳಿ ಮತ್ತು ಗ್ರಾಮ ಸಮಿತಿಗಳನ್ನು ರಚನೆ ಮಾಡುವ ಮೂಲಕ ಕೂಟವನ್ನು ಬಲಿಷ್ಠಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 1.30 ಲಕ್ಷಕ್ಕೂ ಮೇಲ್ಪಟ್ಟು ತುಳು ಭಾಷಿಕರಿದ್ದು, ಎಲ್ಲಾ ಕ್ಷೇತ್ರದಲ್ಲು ತೊಡಗಿಸಿಕೊಂಡು ಉನ್ನತ ಸ್ಥಾನಮಾನ ಪಡೆಯುವಂತಾಗಬೇಕೆಂದರು.
ತುಳುವೆರ ಜನಪದ ಕೂಟದ ಅಂಗಸಂಸ್ಥೆ ಜನಪದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್ ಭಂಡಾರಿ ಮಾತನಾಡಿ, ತುಳುವೆರ ಶ್ರೇಯೋಭಿವೃದ್ಧಿಗೆ ನಮ್ಮದೇ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಎಲ್ಲರು ಷೇರು ಪಡೆದು ಆರ್ಥಿಕವಾಗಿ ಸಬಲರಾಗುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಹಿರಿಯ ಸಲಹೆಗಾರ ಕೆ.ಆರ್.ಬಾಲಕೃಷ್ಣ ರೈ ಹಾಗೂ ಬಿ.ಇ.ಹೊನ್ನಪ್ಪ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ, ಖಜಾಂಚಿ ಪ್ರಭು ರೈ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಸುರೇಶ್ ಕುಲಾಲ್, ನಿರ್ದೇಶಕರಾದ ಕಲಾವತಿ ಪೂವಪ್ಪ, ಸುಜಾತ ಚಂದ್ರಶೇಖರ್, ಗಿರೀಶ್ ರೈ, ವಿರಾಜಪೇಟೆ ತಾಲ್ಲೂಕು ನಿಕಟ ಪೂರ್ವ ಅಧ್ಯಕ್ಷ ದಾಮೋದರ್ ಆಚಾರ್ಯ, ಕೆ.ಆರ್.ವಿಜಯ, ಪ್ರಮುಖರಾದ ಶಬರಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕ ಕೆ.ಆರ್.ಪುರುಷೋತ್ತಮ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.