ಮಡಿಕೇರಿ, ಆ.8: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾವೇರಿನಾಡು ಕೊಡಗು ಜಿಲ್ಲೆಗೆ ನೀಡಿದ ಕೊಡುಗೆಗಳೇನು ಹಾಗೂ ಅನುದಾನವೆಷ್ಟು ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಹಾಮಳೆಯಿಂದ ಕೊಡಗು ಸಂಕಷ್ಟಕ್ಕೆ ಸಿಲುಕಿದ್ದರೂ ಪ್ರತ್ಯೇಕವಾಗಿ ವಿಶೇಷ ಅನುದಾನ ತರುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ. 2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಅಂದಿನ ಸಮ್ಮಿಶ್ರ ಸರ್ಕಾರ ತಕ್ಷಣ ಜಾಗ ಗುರುತಿಸಿ 800 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿತು. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ಮಳೆಹಾನಿ ಪರಿಹಾರವಾಗಿ ಸೂಕ್ತ ಆರ್ಥಿಕ ನೆರವು ದೊರೆತ್ತಿಲ್ಲ. ಕೇಂದ್ರ ಸರಕಾರ ಯಾವುದೇ ವಿಶೇಷ ಅನುದಾನ ನೀಡದೆ ಕೊಡಗು ಜಿಲ್ಲೆಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಅತಿಮಳೆಯಿಂದಾಗಿ ಸಾವಿರಾರು ಏಕರೆ ಕೃಷಿಭೂಮಿ ಮತ್ತು ಬೆಳೆ ನಾಶವಾಗಿದೆ. ಜಿಲ್ಲೆಯ ರೈತರು ಹಲವು ಬಾರಿ ಪರಿಹಾರಕ್ಕಾಗಿ ಮನವಿ ಮಾಡಿದ್ದರೂ ಇಂದಿಗೂ ಬಹುತೇಕ ಮಂದಿಗೆ ಪರಿಹಾರವೇ ಸಿಕ್ಕಿಲ್ಲ. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತಾಪಿ ವರ್ಗ ಮಹಾಮಳೆಯ ನಡುವೆ ಕಾಡು ಪ್ರಾಣಿಗಳ ಹಾವಳಿಯನ್ನೂ ಸಹಿಸಿಕೊಳ್ಳಬೇಕಾಗಿದೆ. ಕಳೆದ 3 ವರ್ಷಗಳಿಂದ ನದಿ ನೀರಿನ ಪ್ರವಾಹದ ಆತಂಕದ ನಡುವೆ ಜೀವನ ಸಾಗಿಸುತ್ತಿರುವವರಿಗೆ ಸುರಕ್ಷಿತ ಪ್ರದೇಶದಲ್ಲಿ ಶಾಶ್ವತ ಸೂರು ನೀಡಲು ಸರ್ಕಾರ ಆಸಕ್ತಿ ತೋರಿಲ್ಲ ಎಂದು ಟೀಕಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ಮೈಸೂರಿಗೆ ಸೀಮಿತವಾಗಿದ್ದಾರೆ. ಮಳೆಹಾನಿಗೆಂದು ಕೇಂದ್ರದಿಂದ ವಿಶೇಷ ಪರಿಹಾರದ ಪ್ಯಾಕೇಜ್ ನ್ನು ತರುವ ಕಾಳಜಿ ತೋರದೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೊಡಗು ಜಿಲ್ಲೆಗೆ ಕೋಟಿ ಕೋಟಿ ಅನುದಾನ ಬರುತ್ತಿದೆ ಎನ್ನುವ ಜನಪ್ರತಿನಿಧಿಗಳು 2018-19ರ ನಂತರ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ನಷ್ಟವಾಗಿರುವ ರೈತರಿಗೆ ಸಮರ್ಪಕವಾಗಿ ಪರಿಹಾರ ಯಾಕೆ ವಿತರಣೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಸ್ತೆ, ಕುಡಿಯುವ ನೀರು, ವಿದ್ಯುತ್, ನಿವೇಶನ, ಕಾಡು ಪ್ರಾಣಿಗಳ ಹಾವಳಿ, ರೈತರ ಬೆಳೆ ನಷ್ಟ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ.
ನಿರಂತರವಾಗಿ ಗೆಲುವು ಸಾಧಿಸುತ್ತಾ ಬರುತ್ತಿರುವ ಬಿಜೆಪಿ ಪ್ರತಿನಿಧಿಗಳ ಸ್ಪಂದನೆ ನಿರಾಶಾದಾಯಕವಾಗಿದ್ದು, ಮುಂದಿನ ಚುನಾವಣೆಯಲ್ಲಿ ನೊಂದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸರಿತಾ ಪೂಣಚ್ಚ ಭವಿಷ್ಯ ನುಡಿದಿದ್ದಾರೆ.