ಮಡಿಕೇರಿ, ಆ.10: ಕ್ವಿಟ್ ಇಂಡಿಯಾ ಚಳುವಳಿ ಭಾರತ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಚಳವಳಿ ಎಂದು ಕೆಪಿಸಿಸಿ ಸಂವಾಹನ ಸದಸ್ಯ ಟಿ.ಪಿ.ರಮೇಶ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 80ನೇ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1942 ಆ.8 ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರು “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಇಲ್ಲವೆ “ಮಾಡು ಇಲ್ಲವೆ ಮಡಿ” ಭಾರತೀಯರ ಕ್ರಾಂತಿಕಾರಿ ಹೋರಾಟಕ್ಕೆ ಸಿದ್ಧರಾಗಿ ಎಂದು ಮಹಾತ್ಮಗಾಂಧಿಯವರು ನೀಡಿದ ಕರೆ ದೇಶದಾದ್ಯಂತ ಏಕಕಾಲಕ್ಕೆ ಮೊಳಗಿತು.
1942ರಲ್ಲಿ ಬೊಂಬಾಯಿಯ ವಾರ್ದಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಕೈಗೊಂಡ ಈ ನಿರ್ಣಯಕ್ಕೆ ಜನ ಒಮ್ಮತದಿಂದ ಬೆಂಬಲಿಸಿ ದಲಿತರು, ಕಾಂಗ್ರೆಸ್ ಕಾರ್ಯಕರ್ತರು, ದುರ್ಬಲವರ್ಗದವರು, ಎಲ್ಲಾ ವರ್ಗದವರೂ ಒಗ್ಗೂಡಿ ರೈಲ್ವೆ ಸಂಪರ್ಕ, ಅಂಚೆ ಕಚೇರಿಗಳ ಲೂಟಿ ಮೊದಲಾದ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸುಮಾರು 2 ಲಕ್ಷಕ್ಕೂ ಮಂದಿ ಪ್ರಾಣ ಕಳೆದುಕೊಂಡರು. 60 ಸಾವಿರ ಮಂದಿ ಈ ಹೋರಾಟದಲ್ಲಿ ಭಾಗಿಯಾಗಿ ಗಾಯಗೊಂಡರು. ಆಹಾರಕ್ಕಾಗಿ ದೇಶದಲ್ಲಿ ಹಾಹಾಕಾರ ಉಂಟಾಗಿ ತಿನ್ನಲು ಅನ್ನವಿಲ್ಲದೆ ಬಡ ಬಗ್ಗರೂ, ಜೀವಕಳೆದುಕೊಂಡರು.
ಜೈಲಿನಲ್ಲಿದ್ದು, ಮಹಾತ್ಮಗಾಂಧಿ ಸಂಗಡಿಗರು 1944ರಲ್ಲಿ ಜೈಲಿನಿಂದ ಹೊರ ಬಂದರು. ಇದೇ ಕ್ವಿಟ್ ಇಂಡಿಯಾ ಚಳುವಳಿಯ ಮೂಲ ಉದ್ದೇಶ. ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದಾಗಿತ್ತು ಎಂದು ರಮೇಶ್ ಬಣ್ಣಿಸಿದರು.
ಡಿಸಿಸಿಯ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ಅಂದು ಬ್ರಿಟಿಷರನ್ನು ಭಾರತದಿಂದ ಓಡಿಸುವುದು ನಮ್ಮ ಗುರಿಯಾಗಿತ್ತು. ಇಂದು ಬಿಜೆಪಿಯನ್ನು ಓಡಿಸುವುದು ನಮ್ಮ ಗುರಿಯಾಗಿದೆ ಎಂದು ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕೆಂದು ಕರೆ ನೀಡಿದರು.
ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರಾ ಮೈನಾ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ನಾಗರೀಕರು ಒಂದಾಗಬೇಕಿದೆ ಎಂದರು.
1942ರಲ್ಲಿ ಮಹಾರಾಷ್ಟ್ರದ “ಗಾಲಿಯಾ” ಮೈದಾನದಲ್ಲಿ ನಡೆದ ಈ ಹೋರಾಟ ಇಂದು “ಕಾಂಗ್ರೆಸ್ ಕ್ರಾಂತಿ” ಮೈದಾನವೆಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಸಭೆಗೆ ಮುನ್ನ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಪ್ರಾಣ ಕಳೆದುಕೊಂಡ ಅಸಂಖ್ಯಾತ ಜೀವಗಳ ಆತ್ಮಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿ.ಪಿ.ಸುರೇಶ್, ಫ್ಯಾನ್ಸಿ ಪಾರ್ವತಿ, ಮುಮ್ತಜ್‌ವೇಗಂ, ಹಫೀಜ್, ಸದಾಮುದ್ದಪ್ಪ, ಚುಮ್ಮಿದೇವಯ್ಯ, ಸುರಾಯ್ಯ ಅಬ್ರಾರ್, ಮಿನಾಜ್, ವಿಮಲ, ಶಾರದ, ಕೆ.ಎಂ.ವೆಂಕಟೇಶ್, ಪಿಯುಸ್ ಪೆರೇರಾ, ನಾಗೇಶ್, ದಿವ್ಯ, ರಿಯಾಜ್‌ವುದ್ದೀನ್, ಕಲೀಲ್ ಭಾಷ, ರವಿಗೌಡ, ಪೊನ್ನಮ್ಮ, ಮಾದೇವಮ್ಮ, ರಾಣಿ ಹಾಗೂ ಮೊದಲಾದವರು ಹಾಜರಿದ್ದರು.
ವಂದೆ ಮಾತರಂ ಕಾರ್ಯಕ್ರಮದೊಂದಿಗೆ ಸಭೆ ಆರಂಭಗೊಂಡಿತು. ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ವಂದಿಸಿದರು.
ಸಂತಾಪ : ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ, ಮಡಿಕೇರಿ ಪುರಸಭೆಯ ಮಾಜಿ ಸದಸ್ಯರಾಗಿದ್ದ, ಮೂಢ ಮಾಜಿ ಸದಸ್ಯರಾದ ಶಶಿರೇಖಾ ವರದರಾಜ್ ನಾಯ್ಡು ಹಾಗೂ ಹಿರಿಯ ಕಾಂಗ್ರೆಸ್ಸಿಗರಾದ ಚೆಂಬು-ದಬಡ್ಕ ಗ್ರಾಮದ ಹೊದ್ದೆಟ್ಟಿ ಚೆನ್ನಪ್ಪ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಂತಾಪ ವ್ಯಕ್ತಪಡಿಸಿದೆ.
ಶಶಿರೇಖಾ ನಾಯ್ಡು ಮಡಿಕೇರಿಯ ಹಿರಿಯ ವಕೀಲರಾಗಿದ್ದ ದಿ.ವರದರಾಜ್ ನಾಯ್ಡು ಅವರ ಪತ್ನಿಯಾಗಿದ್ದರು. ಇವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ವೀಣಾ ಅಚ್ಚಯ್ಯ, ಟಿ.ಪಿ.ರಮೇಶ್, ಮಾಜಿ ಸಚಿವೆ ಸುಮವಸಂತ್, ಕೆ.ಪಿ.ಚಂದ್ರಕಲಾ, ವಿ.ಪಿ.ಸುರೇಶ್ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.