ಮಡಿಕೇರಿ, ಸೆ.8: ಶನಿವಾರಸಂತೆ ವ್ಯಾಪ್ತಿಯಲ್ಲಿ ಪರಿಶಿಷ್ಟ ದೌರ್ಜನ್ಯ ಕಾಯ್ದೆ ದುರುಪಯೋಗವಾಗುತ್ತಿದ್ದು, ಕೆಲವು ವ್ಯಕ್ತಿಗಳು ದಲಿತ ಸಂಘಟನೆಗಳ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಗಳ ಜಂಟಿ ವೇದಿಕೆಯ ಕೊಡಗು ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ.
ಈ ಸಂದರ್ಭ ಹಾಜರಿದ್ದು ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಲ್.ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ವೀರೇಂದ್ರ ಹಾಗೂ ಕಾರ್ಯದರ್ಶಿ ಕೆ.ಡಿ.ಜಗದೀಶ್ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದ್ದು, ಒಂದಿಬ್ಬರು ವ್ಯಕ್ತಿಗಳು ಇದಕ್ಕೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಹಣಕ್ಕಾಗಿ ದೂರು ದಾಖಲು ಮಾಡಿ ನಂತರ ರಾಜಿ ಸಂಧಾನದ ಮೂಲಕ ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಬಸವರಾಜು ಎಂಬುವವರ ವಿರುದ್ಧ ದೂರು ನೀಡಲಾಗಿದೆ, ಇವರು ನಾನು ಯಾವುದೇ ತಪ್ಪು ಮಾಡಿಲ್ಲ, ಅವಹೇಳನ ಅಥವಾ ದೌರ್ಜನ್ಯ ಎಸಗಿಲ್ಲ. ಆದರೂ ದೂರು ನೀಡಿದ್ದಾರೆ, ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ದಲಿತ ಸಂಘರ್ಷ ಸಮಿತಿಗಳ ಜಂಟಿ ವೇದಿಕೆಗೆ ಪತ್ರ ಬರೆದಿದ್ದಾರೆ. ಈ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ನಡೆದಿದ್ದರೆ ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅನಧಿಕೃತ ದಲಿತ ಸಂಘಟನೆಗಳ ಹೆಸರು ಹೇಳಿಕೊಂಡು ಸ್ವಯಂ ಘೋಷಿತ ನಾಯಕರಂತೆ ಪ್ರತಿಬಿಂಬಿಸಿಕೊಳ್ಳುತ್ತ ಇದೇ ರೀತಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿಯಲ್ಲಿ ತೊಡಗಿದ್ದವರ ವಿರುದ್ಧ ಈ ಹಿಂದೆಯೂ ಪೊಲೀಸರಿಗೆ ದೂರು ನೀಡಲಾಗಿದೆ. ಇದೀಗ ಇದೇ ವ್ಯಕ್ತಿಗಳಿಂದ ಬಸವರಾಜು ಅವರಿಗೆ ಅನ್ಯಾಯವಾಗಿದೆ ಎನ್ನುವ ಅನುಮಾನ ಕಾಡುತ್ತಿದೆ. ಆದ್ದರಿಂದ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ದೌರ್ಜನ್ಯ ಕಾಯ್ದೆ ದುರುಪಯೋಗವಾದಂತೆ ಎಚ್ಚರಿಕೆಯನ್ನು ನೀಡಬೇಕೆಂದು ಪಾಲಾಕ್ಷ ಹಾಗೂ ವೀರೇಂದ್ರ ಆಗ್ರಹಿಸಿದರು.
ಬ್ಲಾö್ಯಕ್ ಮೇಲ್ ನಲ್ಲಿ ತೊಡಗಿರುವ ನಕಲಿ ದಲಿತ ಸಂಘಟನೆಗಳ ಬಗ್ಗೆ ಜನರು ಕೂಡ ಎಚ್ಚೆತ್ತುಕೊಳ್ಳಬೇಕೆಂದು ಅವರು ಮನವಿ ಮಾಡಿದರು.