ಮಡಿಕೇರಿ, ಸೆ.8: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಡಿಕೇರಿ ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ಮೂರ್ನಾಡಿನ ಎಂ.ಬಾಡಗ 1 ರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಕೀರ್ತನ್, ಪೋಷಣ್ ಅಭಿಯಾನ ಪ್ರಧಾನಮಂತ್ರಿ ಅವರ ಕನಸಿನ ಕಾರ್ಯಕ್ರಮವಾಗಿದೆ. ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಆರೋಗ್ಯವಂತಾಗಿರಲು ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಇದರಿಂದ ತಾಯಿ ಮತ್ತು ಮಗುವಿಗೆ ಸಹಕಾರಿಯಾಲಿದೆ ಎಂದರು.
ಆರು ತಿಂಗಳುವರೆಗೆ ಮಕ್ಕಳಿಗೆ ಎದೆಹಾಲು ಕುಡಿಸಬೇಕು. ವೈದ್ಯರ ಸೂಚನೆಯಂತೆ ಕಾಲ ಕಾಲಕ್ಕೆ ಲಸಿಕೆ ಹಾಕಿಸಬೇಕು. ಮಗುವಿನ ತೂಕ ಕಡಿಮೆ ಇದ್ದಲ್ಲಿ ತೂಕ ಹೆಚ್ಚಿಸಲು ಪೌಷ್ಠಿಕ ಆಹಾರ ನೀಡಬೇಕು. ಸೊಪ್ಪು, ತರಕಾರಿಯನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಮಕ್ಕಳಿಗೆ ಬೆಳವಣಿಗೆ ಕುಂಠಿತವಾಗದಂತೆ ಎಚ್ಚರವಹಿಸಬೇಕು, ಮಗುವಿನ ಎತ್ತರಕ್ಕೆ ಸರಿಯಾಗಿ ತೂಕ ಇರಬೇಕು. ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಪೌಷ್ಠಿಕತೆ ಹೆಚ್ಚಾಗಿ ಇರಬೇಕು. ಹೀಗೆ ಮಾಡುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಉಂಟಾಗದಂತೆ ಎಚ್ಚರವಹಿಸಬೇಕು. ಎಲ್ಲಾ ರೀತಿಯ ತರಕಾರಿ ಮತ್ತು ಸೊಪ್ಪನ್ನು ಸೇವಿಸಬೇಕು. ಇದರಿಂದ ಖನಿಜಾಂಶ ದೊರೆಯಲಿದೆ. ರಕ್ತಹೀನತೆ ತಡೆಯಲು ಸೊಪ್ಪು, ತರಕಾರಿಯನ್ನು ಸೇವಿಸಬೇಕು. ಪೋಷಣಾ ಅಭಿಯಾನದ ಮುಖ್ಯ ಉದ್ದೇಶ ಬಾಣಂತಿಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು. ಆ ಉದ್ದೇಶದಿಂದ ಪೌಷ್ಟಿಕ ಆಹಾರವನ್ನು ಒದಗಿಸಿ ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಯಾರೂ ಕೂಡ ಪೌಷ್ಠಿಕ ಆಹಾರದಿಂದ ವಂಚಿತರಾಗಬಾರದೆಂದು ಈ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ತಳಮಟ್ಟಕ್ಕೆ ತಲುಪಿಸುವಲ್ಲಿ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಇಂದಿನ ಬದಲಾದ ಆಹಾರ ಪದ್ಧತಿಯಿಂದ ಪ್ರತಿಯೊಬ್ಬರೂ ಪೌಷ್ಠಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಪೌಷ್ಠಿಕಾಂಶಗಳ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳಲ್ಲಿ ಅಪೌಷ್ಟಿಕತೆ ಪ್ರತಿಯೊಬ್ಬರೂ ದಿನನಿತ್ಯ ಸೇವಿಸುವ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ನಿತ್ಯ ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಸವಿತಾ ಕೀರ್ತನ್ ಸಲಹೆ ನೀಡಿದರು.
ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ದಿವ್ಯ, ಅಂಗನವಾಡಿ ಕಾರ್ಯಕರ್ತೆ ಪಿ.ಯು.ಚೈತ್ರ, ಬಿ.ಆರ್.ಭವ್ಯ, ಸಹಾಯಕಿ ಪ್ರೀತು, ಸ್ವ ಸಹಾಯ ಹಾಗೂ ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಪುಟಾಣಿ ಮಕ್ಕಳು, ತಾಯಂದಿರು ಉಪಸ್ಥಿತರಿದ್ದರು. ಎಂ.ಬಾಡಗ 1 ರ ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಜಯಂತಿ ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗೂ ಪೋಷಣಾ ವಸ್ತುಗಳ ಪ್ರಾತ್ಯಕ್ಷಿಕೆ ನಡೆಯಿತು.