ಮಡಿಕೇರಿ, ಸೆ.9: ಸುನ್ನಿ ಮಹಲ್ ಒಕ್ಕೂಟದ ಕೊಡಗು ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ.ಎಂ.ಹಮೀದ್ ಮೌಲವಿ ಸುಂಟಿಕೊಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ.ಅಬ್ದುಲ್ ಕರೀಂ ಸಿದ್ದಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಿದ್ದಾಪುರ ವರಕ್ಕಲ್ ಸ್ಮಾರಕ ಸಭಾಂಗಣದಲ್ಲಿ ನಡೆದ ಸುನ್ನಿ ಮಹಲ್ ಒಕ್ಕೂಟದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘಟನೆಯ ಉಪಾಧ್ಯಕ್ಷರಾಗಿ ಅಹ್ಮದ್ ಹಾಜಿ ಪೊನ್ನಂಪೇಟೆ, ರಹೂಫ್ ಹಾಜಿ ಸಿದ್ದಾಪುರ, ಸುಲೈಮಾನ್ ಕೊಡ್ಲಿಪೇಟೆ, ಖಜಾಂಚಿಯಾಗಿ ರಫೀಕ್ ಹಾಜಿ ಸುಂಟಿಕೊಪ್ಪ, ಉಪ ಕಾರ್ಯದರ್ಶಿಯಾಗಿ ಸತ್ತಾರ್ ಪೊನ್ನತುಮಟ್ಟ, ಮೊಯಿಧೀನ್ ಕುಟ್ಟಿ ತಿತಿಮತಿ, ಸಲಹೆಗಾರರಾಗಿ ಬಶೀರ್ ಹಾಜಿ ಗೋಣಿಕೊಪ್ಪ, ಮುಸ್ತಫ ಹಾಜಿ ಸಿದ್ದಾಪುರ, ಬಿರಾನ್ ಕುಟ್ಟಿಹಾಜಿ ನಲ್ವತ್ತೆಕರೆ ನೇಮಕಗೊಂಡರು. ಕಾರ್ಯಕಾರಿ ಸಮಿತಿಗೆ ಉಮ್ಮರ್ ಫೈಝಿ, ಇಕ್ಬಾಲ್ ಉಸ್ತಾದ್, ಹಸನ್ ಕುಟ್ಟಿ, ಹನಿಫಾ ಪಿರಿಯಾಪಟ್ಟಣ, ಬಶೀರ್ ತಿತಿಮತಿ, ಮೊಹಮ್ಮದ್ ಪಿರಿಯಾಪಟ್ಟಣ, ಉಸ್ಮಾನ್ ಫೈಜಿ ಸೇರಿದಂತೆ 40 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಸಿ.ಎಂ.ಹಮೀದ್ ಮೌಲವಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರತಿ ಮಹಲ್ಲುಗಳು ಕೈಕೊಳ್ಳಬೇಕಾದ ಕಾರ್ಯ ಚಟುವಟಿಕೆಗಳನ್ನು ಮಹಲ್ಲಿನಲ್ಲಿ ಜಾರಿಗೆ ತರಲು ಮತ್ತು ಸಮಾಜವನ್ನು ಒಳಿತಿನ ಕಡೆಗೆ ಕೊಂಡೊಯ್ಯಲು ಬೇಕಾದ ಎಲ್ಲಾ ಪರಿಶ್ರಮಗಳಿಗೂ ಸುನ್ನಿ ಮಹಲ್ ಒಕ್ಕೂಟ ಮಾರ್ಗದರ್ಶಿಯಾಗಲಿದೆ ಎಂದರು.
ಮಾದಕ ವಸ್ತು ವಿರುದ್ಧ ಅಭಿಯಾನ
ಇಂದು ಮಾನವ ಸಮೂಹಕ್ಕೆ ಮಾರಕವಾದ ಮತ್ತು ಯುವ ಸಮೂಹ ಹಾಗೂ ವಿದ್ಯಾರ್ಥಿಗಳ ಬದುಕನ್ನು ಸರ್ವನಾಶ ಮಾಡುತ್ತಿರುವ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಕುರಿತು ಕೊಡಗು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಅಭಿಯಾನವನ್ನು ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಒಂದು ತಿಂಗಳ ಕಾಲ ನಡೆಸಲಾಗುವುದು ಎಂದು ತಿಳಿಸಿದರು.