ಮಡಿಕೇರಿ. ಸೆ.13: ವಾರದ ಶುಕ್ರವಾರ ದಿನ ಮಡಿಕೇರಿ ನಗರದಲ್ಲಿ ಪ್ರತಿಭಟನೆ, ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಬಾರದು ಮತ್ತು ಯಾವುದೇ ದಿನಗಳಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಅವರ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಮುಖರು ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ವಿವರಿಸಿದರು.
ದೇಶದ ಹೆಮ್ಮೆಯ ವೀರಸೇನಾನಿ, ಕೊಡಗಿನ ಶಿಸ್ತಿನ ಪುತ್ರ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆ ಇರುವ ವೃತ್ತ ಮಡಿಕೇರಿ ನಗರದಲ್ಲಿದೆ. ಇದು ಅತ್ಯಂತ ಗೌರವಯುತ ಪ್ರದೇಶವಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಅಗೌರವದ ವಾತಾವರಣ ಸೃಷ್ಟಿಯಾಗುತ್ತಿದೆ. ಕೊಡಗಿನ ಶಿಸ್ತಿನ ವಾತಾವರಣಕ್ಕೆ ದಕ್ಕೆಯಾಗುತ್ತಿದೆ. ವೃತ್ತದ ಪಕ್ಕದಲ್ಲೇ ಜಿಲ್ಲಾ ಆಸ್ಪತ್ರೆ ಇದೆ, ಅಲ್ಲದೆ ಮೈಸೂರು, ಮಂಗಳೂರು ಹೆದ್ದಾರಿಯೂ ಹಾದು ಹೋಗುತ್ತದೆ.
ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆ ನಡೆಸುವುದರಿಂದ ಆಸ್ಪತ್ರೆಗೆ ರೋಗಿಗಳನ್ನು ಸಕಾಲದಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಬರುವ ಅಥವಾ ಮೈಸೂರು, ಮಂಗಳೂರು ಆಸ್ಪತ್ರೆಗೆ ತೆರಳುವ ರೋಗಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಬಾಕಿಯಾದ ಉದಾಹರಣೆಗಳಿವೆ. ಅಲ್ಲದೆ ನೂರಾರು ವಾಹನಗಳು ಕಿಲೋಮೀಟರ್ ನಷ್ಟು ದೂರ ಸಾಲುಗಟ್ಟಿ ನಿಂತಿರುತ್ತವೆ. ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ತಲುಪಿಸಲು ಲಾರಿ ಚಾಲಕರುಗಳಿಗೆ ಅಸಾಧ್ಯವಾಗಿದೆ. ಬಸ್ ಪ್ರಯಾಣಿಕರಂತು ಗಂಟೆಗಟ್ಟಲೆ ಬಸ್ ನಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರಿ ನೌಕರರಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುವವರು ಮತ್ತು ಇತರರು ಮುಖಾಮುಖಿಯಾಗುವುದರಿಂದ ಘರ್ಷಣೆಗಳು ನಡೆಯುತ್ತಿದೆ, ಅಲ್ಲದೆ ಸಾರ್ವಜನಿಕ ಶಾಂತಿಭಂಗವಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳ ಗಮನ ಸೆಳೆದರು.ಇತ್ತೀಚಿನ ದಿನಗಳಲ್ಲಿ ಮಡಿಕೇರಿ ನಗರದಲ್ಲಿ ಪ್ರತಿಭಟನೆಗಳು ಮತ್ತು ಪ್ರತಿಭಟನಾ ಮೆರವಣಿಗೆಗಳು ಶುಕ್ರವಾರ ದಿನವೇ ಹೆಚ್ಚಾಗಿ ನಡೆಯುತ್ತಿದೆ. ಶುಕ್ರವಾರ ವಾರದ ಸಂತೆಯ ದಿನವಾಗಿದ್ದು, ಪ್ರತಿಭಟನೆಗಳಿಂದ ಜನಜೀವನಕ್ಕೆ ಅಡಚಣೆಯಾಗುತ್ತಿದೆ.
ಗಂಟೆಗಟ್ಟಲೆ ವಾಹನಗಳು ನಿಲುಗಡೆಗೊಳ್ಳುವುದರಿಂದ ಪ್ರಯಾಣಿಕರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.
ಗ್ರಾಮೀಣ ಭಾಗದ ಜನರು ಹಾಗೂ ಕೂಲಿ ಕಾರ್ಮಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಸಂತೆ ದಿನವಾದ ಶುಕ್ರವಾರ ಮಡಿಕೇರಿಗೆ ಆಗಮಿಸುತ್ತಾರೆ. ಪ್ರತಿ ಶುಕ್ರವಾರ ಸಾವಿರಾರು ಜನರಿಂದ ಮಡಿಕೇರಿ ನಗರ ತುಂಬಿರುತ್ತದೆ. ಈ ನಡುವೆಯೇ ಪ್ರತಿಭಟನೆಗಳು ನಡೆದಾಗ ವಸ್ತುಗಳ ಖರೀದಿಗಾಗಿ ಬಂದ ಜನರಿಗೆ ತೊಂದರೆ ಎದುರಾಗುತ್ತಿದೆ. ಅಲ್ಲದೆ ವಾಹನದಟ್ಟಣೆ ಹೆಚ್ಚಾಗಿ ಪರ ಊರುಗಳಿಗೆ ತೆರಳುವವರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಶುಕ್ರವಾರದ ಪ್ರತಿಭಟನೆಗಳಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವುದಲ್ಲದೆ ಕಾನೂನು ಸುವ್ಯವಸ್ಥೆಗೂ ಭಂಗ ಬರುತ್ತಿದೆ. ಇತ್ತೀಚೆಗೆ ಎರಡು ರಾಜಕೀಯ ಪಕ್ಷಗಳು ಶುಕ್ರವಾರ ದಿನದಂದೇ ಪ್ರತಿಭಟನೆಗೆ ಕರೆ ಕೊಟ್ಟ ಕಾರಣದಿಂದ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು.
ನಿಷೇಧಾಜ್ಞೆಯಿಂದಾಗಿ ಜಿಲ್ಲೆಯ ಜನ ಮತ್ತು ವರ್ತಕರು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸಿದರು. ಶುಕ್ರವಾರದ ಮಡಿಕೇರಿ ಸಂತೆ ರದ್ದಾಗಿ ವ್ಯಾಪಾರಿಗಳು ಅಪಾರ ನಷ್ಟವನ್ನು ಎದುರಿಸುವಂತ್ತಾಯಿತು. ಪ್ರವಾಸಿಗರನ್ನೇ ನಂಬಿರುವ ವಿವಿಧ ವಾಣಿಜ್ಯ ಕೇಂದ್ರಗಳು ಹಾಗೂ ಉದ್ಯೋಗಿಗಳು ಕೂಡ ನಷ್ಟಕ್ಕೊಳಗಾದರು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾರದ ಶುಕ್ರವಾರದ ದಿನ ಮಡಿಕೇರಿ ನಗರದಲ್ಲಿ ಪ್ರತಿಭಟನೆ, ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಬಾರದು. ಸಾರ್ವಜನಿಕರು ಹಾಗೂ ರೋಗಿಗಳ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆಗೆ ಅವಕಾಶ ನೀಡಬಾರದೆಂದು ಕೆ.ಜಿ.ಪೀಟರ್ ಒತ್ತಾಯಿಸಿದರು.
ಉಪಾಧ್ಯಕ್ಷ ಎಂ.ಹೆಚ್.ಶೌಕತ್, ಸಂಘಟನಾ ಕಾರ್ಯದರ್ಶಿ ರೆಹಮಾನ್ ಖಾನ್, ಖಜಾಂಚಿ ಎಂ.ಹೆಚ್.ಅಜೀಜ್, ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ.ಎಂ.ಯಾಕುಬ್, ಸಂಘಟನಾ ಕಾರ್ಯದರ್ಶಿ ಎಂ.ಬಿ.ಕೌಶರ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.