ಮಡಿಕೇರಿ, ಸೆ.14: ಕೊಡಗಿನ ಗಡಿ ಗ್ರಾಮ ಕರಿಕೆ ಸರ್ಕಾರಿ ಬಸ್ ಸಂಪರ್ಕದಿಂದ ವಂಚಿತವಾಗಿದೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದು, ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದಿಂದ ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪೋ ಎದುರು ಪ್ರತಿಭಟನೆ ನಡೆಸುವುದಾಗಿ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಎಚ್ಚರಿಕೆ ನೀಡಿದ್ದಾರೆ.
ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅರ್ಧವಾರ್ಷಿಕ ಪರೀಕ್ಷೆ ಕೂಡ ಸಮೀಪಿಸಿದ್ದು, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ತಲುಪಲು ಸಾಧ್ಯವಾಗದೆ ಗೊಂದಲ ಸೃಷ್ಟಿಯಾಗಿದೆ. ಜಿಲ್ಲಾ ಕೇಂದ್ರ ಮತ್ತು ಹೋಬಳಿ ಕೇಂದ್ರಕ್ಕೆ ಹೋಗಿ ಬರಲು ಕರಿಕೆ ಗ್ರಾಮಸ್ಥರಿಗೆ ಅಡಚಣೆಯಾಗಿದೆ.
ಕಳೆದ ಒಂದು ದಶಕದಿಂದ ಕರಿಕೆ ಗ್ರಾಮಕ್ಕೆ ಮಡಿಕೇರಿಯಿಂದ ಸಂಜೆ 4.30 ಗಂಟೆಗೆ ಸರ್ಕಾರಿ ಬಸ್ಸು ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಈ ಬಸ್ ಸೇರಿದಂತೆ ಇದ್ದ ಬೆರಳೆಣಿಕೆಯಷ್ಟು ಬಸ್ ಗಳನ್ನು ಮಳೆ ಮತ್ತು ರಸ್ತೆ ಅವ್ಯವಸ್ಥೆಯ ಕಾರಣ ನೀಡಿ ನಿಲುಗಡೆಗೊಳಿಸಲಾಗಿದೆ.
ಕಳೆದ ಎರಡು ತಿಂಗಳುಗಳಿಂದ ಬಸ್ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈಗಾಗಲೇ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಬಸ್ ಸಂಚಾರ ಆರಂಭಗೊಂಡಿಲ್ಲವೆಂದು ಬಾಲಚಂದ್ರ ನಾಯರ್ ಆರೋಪಿಸಿದ್ದಾರೆ.
ಇನ್ನು ಒಂದು ವಾರದೊಳಗೆ ಕರಿಕೆಗೆ ಬಸ್ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಡಿಪೋ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.