ಮಡಿಕೇರಿ: ಲಯನ್ಸ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು.
ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಲಯಾಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಲಯನ್ಸ್ ಸಂಸ್ಥೆಯ ಸಾಮಾಜಿಕ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕೆಂದರು. ಸದಸ್ಯರ ಸಂಖ್ಯೆ ಹೆಚ್ಚಿಸುವಂತೆ ಸಲಹೆ ನೀಡಿದ ಅವರು, ವಿಶೇಷ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ದಿನದ ಅಂಗವಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಪಾರ್ವತಿ ಅಪ್ಪಯ್ಯ ಅವರನ್ನು ಲಯನ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪಾರ್ವತಿ ಅಪ್ಪಯ್ಯ, ಗುರುಗಳಿಗೆ ವಿಶೇಷ ಸ್ಥಾನಮಾನವಿದ್ದು, ಸಮಾಜದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಲಯನ್ಸ್ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಡಿಕೇರಿ ಲಯನ್ಸ್ ಕ್ಲಬ್ ನ ಸದಸ್ಯರುಗಳಾದ ವನಜಾಕ್ಷಿ ದಾಮೋದರ್ ಹಾಗೂ ಸೌಮ್ಯ ನಿರಂಜನ್ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಇದೇ ಸಂದರ್ಭ ಮೇಕೇರಿಯ ಬಡ ಕುಟುಂಬಕ್ಕೆ ವಿವಾಹದ ಖರ್ಚಿಗಾಗಿ ಲಯನ್ಸ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಲಯನ್ಸ್ ಅಧ್ಯಕ್ಷೆ ಕನ್ನಂಡ ಕವಿತ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ವಲಯ ಸಂಯೋಜಕ ನಟರಾಜ್ ಕೆಸ್ತೂರು, ವಲಯದ ಪ್ರಥಮ ಮಹಿಳೆ ಅರುಣ ಮೋಹನ್, ಪ್ರಾಂತೀಯ ರಾಯಭಾರಿ ನವೀನ್ ಅಂಬೆಕಲ್ಲು, ವಲಯ ಸಂಸ್ಥೆಗಳಾದ ಕುಶಾಲನಗರ, ಪಿರಿಯಾಪಟ್ಟಣ, ಸೋಮವಾರಪೇಟೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಯನ್ ಸತೀಶ್ ರೈ ಹಾಗೂ ದೀಪ ನಾಗೇಂದ್ರ ಧ್ವಜ ವಂದನೆ ಮತ್ತು ಲಯನ್ಸ್ ನೀತಿ ಸಂಹಿತೆಯನ್ನು ವಾಚಿಸಿದರು. ಲಯನ್ ಡಿ.ಜಿ.ಕಿಶೋರ್ ಹಾಗೂ ಗೀತಾ ಮಧುಕರ್ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯದರ್ಶಿ ಪಿ.ಪಿ.ಸೋಮಣ್ಣ ವರದಿ ವಾಚಿಸಿದರು. ಕನ್ನಂಡ ಬೊಳ್ಳಪ್ಪ ಪ್ರಾರ್ಥಿಸಿ, ಕನ್ನಂಡ ಕವಿತ ಸ್ವಾಗತಿಸಿ, ಖಜಾಂಚಿ ಡಿ.ಮಧುಕರ್ ಶೇಟ್ ವಂದಿಸಿದರು.