ಮಡಿಕೇರಿ : ಸಾಹಿತಿ ಉಳುವಂಗಡ ಕಾವೇರಿ ಉದಯ ಬರೆದಿರುವ ಕೊಡವ ಮಕ್ಕಡ ಕೂಟದ ೫೯ನೇ ಪುಸ್ತಕ “ಪೊಲಂದ ಬದ್‌ಕ್” ಇಂದು ಬಿಡುಗಡೆಗೊಂಡಿತು.
ನಗರದ ಪತ್ರಿಕಾಭವನದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ಸಾಹಿತ್ಯದ ಬೆಳವಣಿಗೆಗೆ ಪುಸ್ತಕೋದ್ಯಮದ ಕೊಡುಗೆ ಅಪಾರವೆಂದರು.
ಸಾಮಾಜಿಕ ಜಾಲತಾಣಗಳ ದಾಳಿಯಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊಸ ಪುಸ್ತಕಗಳ ಮುದ್ರಣ ಸಂಖ್ಯೆ ಕಡಿಮೆಯಾಗುತ್ತಿದೆ, ಓದುವವರ ಸಂಖ್ಯೆ ಹೆಚ್ಚಾಗಬೇಕಾದರೆ ಸಾಹಿತ್ಯ ವೈಜ್ಞಾನಿಕವಾಗಿ ಬೆಳವಣಿಗೆಯನ್ನು ಕಾಣಬೇಕು ಎಂದರು.
ಇತರ ಭಾಷೆಗೆ ಕಡಿಮೆ ಇಲ್ಲ ಎನ್ನುವಂತೆ ಕೊಡವ ಸಾಹಿತ್ಯ ಬೆಳೆಯುತ್ತಿದೆ. ಇಂದು ಕೊಡವ ಭಾಷೆ ಕೊಡವರಿಗೆ ಮಾತ್ರ ಸೀಮಿತವಾಗಿಲ್ಲ, ಪ್ರತಿಯೊಬ್ಬ ಸಾಹಿತ್ಯಾಸಕ್ತ ಕೊಡವ ಭಾಷೆಯಿಂದ ಆಕರ್ಷಿತನಾಗಿ ಸಾಹಿತ್ಯ ಕೃಷಿಗೆ ಮುಂದಾಗುತ್ತಿರುವುದು ಶ್ಲಾಘನೀಯ. ಕೊಡವ ಭಾಷಿಕರಲ್ಲದವರು ಕೂಡ ಕೊಡವ ಭಾಷೆಯ ಪುಸ್ತಕಗಳನ್ನು ಬರೆಯುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
೧೯೦೬ ರಲ್ಲಿ ವರಕವಿ ಹರದಾಸ ಅಪ್ಪಚ್ಚ ಕವಿ ಅವರು ಯಯಾತಿ ನಾಟಕ ರಚನೆ ಮಾಡುವ ಮೂಲಕ ಕೊಡವ ಸಾಹಿತ್ಯ ಲೋಕ ತೆರೆದುಕೊಂಡಿತು. ಅಂದು ಪುಸ್ತಕ ಮುದ್ರಣಕ್ಕಾಗಿ ಮೈಸೂರು ಮತ್ತು ಮಂಗಳೂರನ್ನು ಅವಲಂಬಿಸಬೇಕಾಗಿತ್ತು. ಸಾರಿಗೆ ವ್ಯವಸ್ಥೆ ಇಲ್ಲದೆ ಬರಹಗಾರರು ಸಂಕಷ್ಟದ ಪರಿಸ್ಥಿತಿಯಲ್ಲಿ ಪುಸ್ತಕಗಳನ್ನು ಮುದ್ರಿಸಬೇಕಾಗಿತ್ತು. ೧೯೭೨ ರ ನಂತರ ಕೊಡವ ಸಾಹಿತ್ಯ ವ್ಯವಸ್ಥಿತವಾಗಿ ಬೆಳೆಯಲು ಆರಂಭಿಸಿತು. ಕೊಡವ ಭಾಷೆ ಬಗ್ಗೆ ಜಾಗೃತಿ ಮೂಡಲಾರಂಭಿಸಿತು, ಕೊಡವ ಸಾಹಿತ್ಯ ಅಕಾಡೆಮಿ ರಚನೆಯಾದ ನಂತರ ಮತ್ತಷ್ಟು ಬಲ ಸಿಕ್ಕಿತು. ಪ್ರಸ್ತುತ ವರ್ಷಗಳಲ್ಲಿ ಸಾಹಿತ್ಯ ಪರವಾದ ಸಂಘಟನೆಗಳ ಹೆಚ್ಚಿನ ಸಹಕಾರ ದೊರೆಯುತ್ತಿದ್ದು, ಕೊಡವ ಮಕ್ಕಡ ಕೂಟದ ಸಾಹಿತ್ಯಾಸಕ್ತಿಯ ಫಲದಿಂದ ೫೯ ಪುಸ್ತಕಗಳು ಹೊರ ಬರಲು ಸಾಧ್ಯವಾಯಿತು ಎಂದು ಪೂವಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
“ಪೊಲಂದ ಬದ್‌ಕ್” ಪುಸ್ತಕ ರಚಿಸಿದ ಸಾಹಿತಿ ಉಳುವಂಗಡ ಕಾವೇರಿ ಉದಯ ಮಾತನಾಡಿ ಓರ್ವ ಶೋಷಿತ ಹೆಣ್ಣು ಹೆದರದೆ ಧೈರ್ಯದಿಂದ ಸಮಾಜದಲ್ಲಿ ಹೇಗೆ ಬದುಕಬಹುದೆಂಬ ವಿಚಾರಕ್ಕೆ ಒತ್ತು ನೀಡಿ ಈ ಕಥೆಯನ್ನು ಬರೆಯಲಾಗಿದೆ. ಒಬ್ಬ ಪುರುಷನಿಂದ ಬದುಕು ಹಾಳಾದರು ಮತ್ತೋರ್ವನಿಂದ ಬಾಳು ಹಸನಾಗುವುದನ್ನು ಬರವಣಿಗೆಯ ಮೂಲಕ ಚಿತ್ರಿಸಲಾಗಿದೆ. ಅನ್ಯಾಯಕ್ಕೊಳಗಾದ ನಾರಿ ಕೊರಗುತ್ತ ಮೂಲೆ ಗುಂಪಾಗದೆ ತಲೆಯೆತ್ತಿ ಸಮಾಜವನ್ನು ಎದುರಿಸಬೇಕೆಂಬ ಸಂದೇಶವನ್ನು ನೀಡಲಾಗಿದೆ ಎಂದರು.
“ಪೊಲಂದ ಬದ್‌ಕ್” ನಾನು ರಚಿಸಿದ ೨೪ನೇ ಪುಸ್ತಕವಾಗಿ ಪ್ರಕಟಗೊಂಡಿದ್ದು, ಕೊಡವ ಮಕ್ಕಡ ಕೂಟದಿಂದ ದೊಡ್ಡ ಮಟ್ಟದ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.
ಸಮಾಜ ಸೇವಕ ಹಾಗೂ ಬರಹಗಾರ ತೆನ್ನಿರ ಮೈನಾ ಮಾತನಾಡಿ ಸರಳ ಭಾಷೆಯ ಬರವಣಿಗೆಗಳು ಓದುಗರನ್ನು ಸೆಳೆಯುವಲ್ಲಿ ಹೆಚ್ಚು ಸಫಲವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತಿಗಳಿಗೆ ಪ್ರೋತ್ಸಾಹವನ್ನು ನೀಡಬೇಕೆಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೂಟ ಪ್ರಕಟಿಸಿರುವ ೫೮ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದ್ದು, ಮೂರು ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದರು.
ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ, ಕೊಡಗಿನ ಹಾಗೂ ಕೊಡವ ಆಚಾರ, ವಿಚಾರಕ್ಕೆ ಸಂಬಧಿಸಿದ ಪುಸ್ತಕ, ಮಹಾವೀರ ಚಕ್ರ ಪುರಸ್ಕೃತ ಕೊಡಗಿನ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಜಿಲ್ಲೆಯ ಹಲವು ಉತ್ಸಾಹಿ ಬರಹಗಾರರು ಹಾಗೂ ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯ ಒಟ್ಟು ೫೮ ಕೃತಿಗಳನ್ನು ಬಿಡುಗಡೆ ಮಾಡುವ ಮೂಲಕ ಸಾಹಿತ್ಯ ಲೋಕವನ್ನು ಕೂಟ ಪ್ರೋತ್ಸಾಹಿಸುತ್ತಾ ಬಂದಿದೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೂಟದ ಜಂಟಿ ಕಾರ್ಯದರ್ಶಿ ಕೇಲೆಟ್ಟಿರ ದೇವಯ್ಯ ಹಾಗೂ ನಿರ್ದೇಶಕ ಅಜ್ಜಮಾಡ ವಿನು ಕುಶಾಲಪ್ಪ ಉಪಸ್ಥಿತರಿದ್ದರು.