ಮಡಿಕೇರಿ, ಸೆ.24: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 8.70 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಶೇ.15 ರಷ್ಟು ಡಿವಿಡೆಂಟ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದರು.
ನಗರದ ಕೆಳಗಿನ ಕೊಡವ ಸಮಾಜದಲ್ಲಿ ನಡೆದ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 40 ವರ್ಷಗಳಿಂದ ಸ್ಥಗಿತಗೊಂಡಿದ್ದ ಏಲಕ್ಕಿ ಮಾರಾಟ ವ್ಯವಹಾರವನ್ನು ಕಳೆದ ವರ್ಷದಿಂದ ಆರಂಭಿಸಲಾಗಿದೆ ಎಂದರು.
ಸಂಘದ ವತಿಯಿಂದ ಮುಖ್ಯ ಕಚೇರಿಯಲ್ಲಿ ಸೆ.29 ರಂದು ಸಾಂಬಾರ ಪದಾರ್ಥಗಳ (ಸ್ಪೈಸಸ್) ಮಳಿಗೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಸದಸ್ಯರು ಹಾಗೂ ಬೆಳೆಗಾರರು ತಾವು ಬೆಳೆದ ಉತ್ಪನ್ನಗಳನ್ನು ಸಂಘದ ಮೂಲಕ ಮಾರಾಟ ಮಾಡಿ ಸಂಘದೊಂದಿಗೆ ವ್ಯವಹರಿಸುವಂತೆ ಕೋರಿದರು.
ಸಂಘದ ಮುಖ್ಯ ಕಚೇರಿಯ ಹತ್ಯಾರು ವಿಭಾಗ ಮತ್ತು ಸೋಮವಾರಪೇಟೆ ಶಾಖೆಯ ಹತ್ಯಾರು ವಿಭಾಗಗಳಲ್ಲಿ ಕಾಫಿ ತಾಟು, ಚೀಲ, ಟಾರ್ಪಲ್, ಸಿಮೆಂಟ್ ಶೀಟುಗಳು, ಕೃಷಿ ಪರಿಕರಗಳು, ಕ್ರಿಮಿನಾಶಕಗಳು, ತೋಟಗಳಿಗೆ ಹಾಕುವ ಮಿನ್‌ಶಕ್ತಿ (ಡೋಲೋಮೆಟ್)ಸುಣ್ಣ, ಹಂಚುಗಳು, ಶಕ್ತಿಮಾನ್ ಮದ್ದುಗುಂಡುಗಳಿವೆ. ಉತ್ತಮ ಗುಣಮಟ್ಟದ ಪರಿಕರಗಳು ಕಡಿಮೆ ದರದಲ್ಲಿ ಸಂಘದಲ್ಲಿ ದೊರೆಯುತ್ತದೆ. ಜೊತೆಗೆ ಸಂಘದ ಸದಸ್ಯರುಗಳಿಗೆ ಸಾಮಾಗ್ರಿಗಳ ಖರೀದಿ ಮೇಲೆ ಶೇ.2 ರಷ್ಟು ರಿಬೇಟ್ ನೀಡಲಾಗುತ್ತಿದೆ. ಸದಸ್ಯರುಗಳು ಇದರ ಪ್ರಯೋಜವನ್ನು ಪಡೆದುಕೊಳ್ಳುವಂತೆ ಸೂದನ ಈರಪ್ಪ ಮನವಿ ಮಾಡಿದರು.
ಮೃತಪಟ್ಟ ಸಂಘದ ಸದಸ್ಯರುಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ನಂತರ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸಂಘದ ನಿರ್ದೇಶಕರುಗಳಾದ ಬಿ.ಈ.ಬೋಪಯ್ಯ, ಕೋಳುಮುಡಿಯನ ಆರ್.ಅನಂತಕುಮಾರ್, ಬಿ.ಸಿ.ಚೆನ್ನಪ್ಪ, ಮಂದ್ರೀರ ಜಿ.ಮೋಹನ್‌ದಾಸ್, ಅಜ್ಜಿನಂಡ ಎಂ.ಗೋಪಾಲಕೃಷ್ಣ, ಶಿವಚಾರರ ಎಸ್.ಸುರೇಶ, ಕುಂಭುಗೌಡನ ಡಿ.ವಿನೋದ್‌ಕುಮಾರ್, ಪೇರಿಯನ ಕೆ.ಉದಯ್ ಕುಮಾರ್, ಸಿ.ಪಿ.ವಿಜಯ್ ಕುಮಾರ್, ಪೆಮ್ಮಂಡ ಟಿ.ಬೋಪಣ್ಣ, ಹರಿಜನ ಎ.ಬೊಳ್ಳು, ಕುಡಿಯರ ಬಿ.ಬೆಳ್ಯಪ್ಪ, ಪರಿವಾರ ಎಸ್.ಕವಿತ, ಸಂಘದ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕಿ ಅಂಬೆಕಲ್ಲು ಸುಶೀಲಾ ಕುಶಾಲಪ್ಪ ಪ್ರಾರ್ಥಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ತಮ್ಮಯ್ಯ ನಿರೂಪಿಸಿ, ಉಪಾಧ್ಯಕ್ಷ ಕೆ.ಕೆ.ಗೋಪಾಲ ವಂದಿಸಿದರು.