News Kannada
Friday, September 22 2023
ಮಡಿಕೇರಿ

ಮಡಿಕೇರಿ: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸಭೆ

Madikeri: Congress minority cell meeting
Photo Credit : By Author

ಮಡಿಕೇರಿ, ಸೆ.28: ಕೋಮುವಾದದ ಮೂಲಕ ಸಮಾಜವನ್ನು ಒಡೆಯುವ ಷಡ್ಯಂತ್ರಗಳು ನಡೆಯುತ್ತಿದ್ದು, ಈ ಬಗ್ಗೆ ಜನ ಜಾಗೃತರಾಗಬೇಕು. ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಿ.ಎ.ಜೀವಿಜಯ ಕರೆ ನೀಡಿದ್ದಾರೆ.

ನಗರದ ಕೂರ್ಗ್ ಕಮ್ಯೂನಿಟಿ ಹಾಲ್‌ನಲ್ಲಿ ನಡೆದ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಜನ ಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದ್ದು, ಕಾಂಗ್ರೆಸಿಗರನ್ನು ಗುರಿ ಮಾಡಿ ಕಾನೂನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ದುರಾಡಳಿತದಿಂದ ಬೇಸತ್ತಿರುವ ಜಿಲ್ಲೆಯ ಬಹುತೇಕ ಮಂದಿ ಬಿಜೆಪಿಗೆ ವಿರುದ್ಧವಿದ್ದಾರೆ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಜನರು ಚುನಾವಣೆ ಸಂದರ್ಭ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುಬೇಕು. ಶಾಂತಿ, ಸಹಭಾಳ್ವೆಯೊಂದಿಗೆ ಒಗ್ಗಟ್ಟಾಗಿ ದೇಶ ಕಟ್ಟಬೇಕು ಎಂದು ಜೀವಿಜಯ ತಿಳಿಸಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ, ಕೋಮು ದ್ವೇಷ ಬಿತ್ತುತ್ತಿರುವ ಪಕ್ಷ ರಾಜ್ಯ ಮತ್ತು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಒಂದು ಆಂದೋಲನ, ಜನರ ಕಲ್ಯಾಣಕ್ಕಾಗಿ ಹುಟ್ಟಿಕೊಂಡಿರುವ ಪಕ್ಷ. 137 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಸುಮಾರು 67 ವರ್ಷಗಳ ಕಾಲ ದೇಶವನ್ನು ಆಳ್ವಿಕೆ ಮಾಡಿ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಜನಕಲ್ಯಾಣ ಮಾಡಿದೆ ಎಂದರು.

ಪಕ್ಷ ಸಂಘಟನೆಯಾಗಬೇಕಾದರೆ ಭಾರತೀಯರು ಪ್ರಯತ್ನ ಶೀಲರಾಗಬೇಕು, ಭಾರತೀಯ ಜನತಾ ಪಾರ್ಟಿ ಶ್ರೀಮಂತರ ಪರವಾಗಿದೆ ಹೊರತು ಬಡವರ ಪರವಾಗಿಲ್ಲ. ಮುಂದಿನ ಚುನಾವಣೆಗೆ ಬಿಜೆಪಿಯನ್ನು ಸೋಲಿಸಿ ಬಡವರ ಧ್ವನಿಯಾಗಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಶಾಸಕರು ಇಲ್ಲದಂತಾಗಿದ್ದು, ಅಧಿಕಾರಿಗಳು ಆಡಳಿತ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವ ಮೂಲಕ ಅಧಿಕಾರ ಹಿಡಿಯಲು ಪಣ ತೊಡಬೇಕೆಂದು ರಮೇಶ್ ಹೇಳಿದರು.

ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಸಂಘಟನೆ ಮಾಡದೆ, ನಿರಂತರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಯಾತ್ರೆಯು ಅ.1 ರಂದು ನಂಜನಗೂಡು ವ್ಯಾಪ್ತಿಯ ಕಳಲೆ ಗೇಟ್ ಬಳಿ ಆಗಮಿಸಲಿದ್ದು, ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವಂತೆ ತಿಳಿಸಿದರು.

ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿ, ಬಿಜೆಪಿ ಅಲ್ಪಸಂಖ್ಯಾತರನ್ನು ಶೋಷಣೆ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಪಕ್ಷದೊಳಗಿನ ಜಗಳವನ್ನು ನಿಲ್ಲಿಸಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸನ್ನು ಪ್ರಬಲಗೊಳಿಸಬೇಕು ಎಂದರು.

See also  ಮೈಸೂರು: ಎಂಐಟಿಯಲ್ಲಿ ದಾಖಲೆಯ ಮೋದಿ ಕಲಾಕೃತಿ

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಒಂದೇ ತಾಯಿಯ ಮಕ್ಕಳಂತೆ ಕಂಡಿದೆ. ಈ ಪಕ್ಷವನ್ನು ರಕ್ಷಿಸುವ ಕೆಲಸ ಮಹಿಳೆಯರ ಕೈಯಲ್ಲಿದೆ. ನಿರಂತರ ಬೆಲೆ ಏರಿಕೆ, ಜಿಎಸ್‌ಟಿಯಿಂದಾಗಿ ಜನರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೆ ಕಳಪೆ ಕಾಮಗಾರಿಗಳ ಮೂಲಕ ಜನರ ಹಣ ಪೋಲಾಗುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಆಧಾರ್ ಕಾರ್ಡ್, ರೇಷನ್ ಕಾಡ್‌ಗಳನ್ನು ಲಿಂಕ್ ಮಾಡಲು ಹೇಳುತ್ತಿದೆ. ಆದರೆ ಸಮಾಜವನ್ನು ಒಗ್ಗಟ್ಟಾಗಿ ಮುನ್ನಡೆಸುವ ಕೆಲಸವನ್ನು ಮಾಡುತ್ತಿಲ್ಲ. ರಾಜಕೀಯ ದ್ವೇಷಕ್ಕಾಗಿ ಅಲ್ಪಸಂಖ್ಯಾತರು, ಜನಸಾಮಾನ್ಯರು ಬಲಿಪಶುಗಳಾಗುತ್ತಿದ್ದಾರೆ ಎಂದು ಆರೋಪಿಸಿದರು.

ಜನರು ರಾಜಕೀಯ ಷಡ್ಯಂತ್ರಗಳ ವಿರುದ್ಧ ಜಾಗೃತರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೆಂದು ಪೀಟರ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಲ್ ಪಾಷ, ಅಲ್ಪಸಂಖ್ಯಾತರ ಮಹಿಳಾ ಘಟಕದ ಉಪಾಧ್ಯಕ್ಷೆ ಎಂ.ಎಂ.ಅಮೀನ, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್, ಮಾಜಿ ಸೈನಿಕ ಘಟಕದ ಅಧ್ಯಕ್ಷ ಬೊಳ್ಳಿಯಂಡ ಗಣೇಶ್, ನಗರಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ ಮತ್ತಿತರರು ಉಪಸ್ಥಿತರಿದ್ದರು.

ಮಡಿಕೇರಿ ಬ್ಲಾಕ್ ನ ಹಂಗಾಮಿ ಅಧ್ಯಕ್ಷ ಎಂ.ಎಂ.ಮೊಹಮ್ಮದ್ ಯಾಕುಬ್ ಸ್ವಾಗತಿಸಿ, ನಿರೂಪಿಸಿದರು.

ಸನ್ಮಾನ
ಉಗಾಂಡದಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕಗಳಿಸಿ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟು ಜಂಶದ್ ಇಸ್ಮಾಯಿಲ್ ಹಾಗೂ ಕೆಪಿಸಿಸಿ ಮಾಧ್ಯಮ ಘಟಕದ ವಕ್ತಾರರಾಗಿ ಆಯ್ಕೆಯಾದ ಟಿ.ಪಿ.ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ಅಲ್ಪಸಂಖ್ಯಾತ ಮಹಿಳಾ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಹಸ್ತಾಂತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು