News Kannada
Saturday, September 30 2023
ಮಡಿಕೇರಿ

ಮಡಿಕೇರಿ: ಶಾಪಗ್ರಸ್ತ ಸುಬ್ರಹ್ಮಣ್ಯ ನಗರಕ್ಕೆ ವಿಮೋಚನೆ ಕಾಲ ಸನ್ನಿಹಿತ ವಾಗಿದೆಯೇ…!

Madikeri
Photo Credit : By Author

ಮಡಿಕೇರಿ : ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್,ಜಂಟಲ್ ಮ್ಯಾನ್ ಗಳ ತಾಣ ,ಶಿಸ್ತಿನ ನಾಡು ಎಂದೆಲ್ಲಾ ಪ್ರಸಿದ್ಧ ಪಡೆದಿರುವ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಪ್ರಕೃತಿ ದತ್ತ ಸೌಂದರ್ಯದಿಂದ ಕಂಗೊಳಿಸುತ್ತಿರುವ ಸುಂದರವಾದ ವಸತಿ ಬಡಾವಣೆ ಸುಬ್ರಮಣ್ಯ ನಗರ.

ಹಿಂದೆ ರೈಫಲ್ ರೇಂಜ್, ಡಿಎಆರ್ ಕ್ವಾರ್ಟರ್ಸ್ ,ಸ್ಟೋನ್ ಹಿಲ್ ತಳಭಾಗ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಈ ಪ್ರದೇಶದಲ್ಲಿ ಕೆಲವೇ ಮನೆಗಳಿದ್ದವು. ತೊಂಬತ್ತರ ದಶಕದಲ್ಲಿ ಇಲ್ಲಿನ ಪ್ರಶಾಂತ ವಾತಾವರಣ, ಮನಮೋಹಕ ವೀವ್ ಪಾಯಿಂಟ್ ಗಳಿಗೆ ಮನಸೋತ ಅನೇಕ ಜನರು ಮನೆಗಳನ್ನು ಕಟ್ಟಿ ಸುಸಜ್ಜಿತ ಹಾಗೂ ಪ್ರತಿಷ್ಠಿತ ಬಡಾವಣೆಯಾಗಿ ಮಾರ್ಪಾಡು ಮಾಡಿದರು.

ಇಲ್ಲಿನ ನಿವಾಸಿಗಳು ಬಹುತೇಕ ಉನ್ನತ ಉದ್ಯೋಗ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿರುವವರು,ಮಾಜಿ ಸೈನಿಕರು,ಮಕ್ಕಳ ವಿಧ್ಯಾಭ್ಯಾಸ ದ ಸಲುವಾಗಿ ಸೈಟ್ ಖರೀದಿಸಿ ಮನೆ ಕಟ್ಟಿ ಬದುಕು ಕಟ್ಟಿಕೊಂಡವರು.ಒಟ್ಟಿನಲ್ಲಿ ಸಜ್ಜನರ , ಸುಸಂಸ್ಕೃತರ ಬೀಡು ಎಂದೇ ಪರಿಗಣಿಸಬಹುದು.

ತಮ್ಮ ಜೀವಿತದ ದುಡಿಮೆಯ ಹಣವನ್ನು ವ್ಯಯಿಸಿ ಸುಂದರ ಮನೆ ನಿರ್ಮಿಸಿಕೊಂಡು ಬಾಳುತ್ತಿದ್ದ ಈ ಪ್ರದೇಶದ ಜನರಿಗೆ ಅವರ ಅರಿವಿಗೆ ಬಾರದ ಹಾಗೆ ಪ್ರಮಾದವೊಂದು ಜರುಗಿತು. 2005 ನೇ ಇಸವಿಯಲ್ಲಿ ಬಡಾವಣೆಯ ತುತ್ತತುದಿಯಲ್ಲಿ ಇರುವ ಸ್ಟೋನ್ ಹಿಲ್ ನಲ್ಲಿ ಮಡಿಕೇರಿ ನಗರದ ಕಸ ಸಂಗ್ರಹಿಸಿ ಸುರಿಯಲು ಮಡಿಕೇರಿ ನಗರ ಸಭೆ ಆರಂಭಿಸಿತು. 2013 ರ ವರೆಗೆ ಇದರ ವ್ಯತಿರಿಕ್ತ ಪರಿಣಾಮ ಬಡಾವಣೆ ನಿವಾಸಿಗಳ ಗಮನಕ್ಕೆ ಬರಲಿಲ್ಲ. ಯಾವಾಗ ಪ್ರವಾಸೋದ್ಯಮ ಬಿರುಸುಗೊಂಡು ಹೋಟೆಲ್ ಗಳು ,ಲಾಡ್ಜ್ ಗಳು, ಹೋಂ ಸ್ಟೇ ಹೆಚ್ಚಾಯಿತೋ ಆಗ ನೋಡಿ ಸ್ವರ್ಗಕ್ಕೆ ಕಿಚ್ಚು ಹಚ್ಚಿಸುವಂತಿದ್ದ ಈ ಬಡಾವಣೆ ಅಕ್ಷರಶಃ ನರಕವಾಯಿತು. ತ್ಯಾಜ್ಯ ಸುರಿಯುವ ಜಾಗದಲ್ಲಿ ಉತ್ಪತಿಗೊಂಡ ವಿಷಕಾರಕ ನೊಣಗಳು ಮನೆಮನೆಗಳಿಗೆ ನುಗ್ಗಿ ಝೇಂಕರಿಸುತ್ತ ರೋಗ ಹರಡಲು ಪ್ರಾರಂಭಿಸಿದವು.

ಪರಿಣಾಮ ಕೆಮ್ಮು, ದಮ್ಮುಗಳು ಇಲ್ಲಿನ ನಿವಾಸಿಗಳಿಗೆ ಕೊಡುಗೆಯಾಗಿ ದೊರೆಯಿತು. ಜನ ವಾಕಿಂಗ್ ಹೋಗುವುದಕ್ಕೆ ತಿಲಾಂಜಲಿ ಇತ್ತರು. ಡ್ರೈ ಫಿಶ್ ಫ್ರೈ ಮಾಡುವ ದುಸ್ಸಾಹಸಕ್ಕೆ ಯಾರೂ ಕೈ ಹಾಕುತ್ತಿರಲಿಲ್ಲ. ಯಾಕೆಂದರೆ ಫಿಶ್ ಫ್ರೈ ಮಾಡಿದರೆ ಇಡೀ ಮನೆಯೇ ಜೇನುಗೂಡಿನ ರೀತಿ ಪರಿವರ್ತನೆಯಾಗುತಿತ್ತು.

ನವಜಾತ ಕಂದಮ್ಮಗಳಿಗೆ ವರ್ಗಾವಣೆ ಭಾಗ್ಯ
ಮನೆಯೆಂದರೆ ಅಲ್ಲಿ ಮಗುವಿನ ಅಳುವ ಧ್ವನಿ ಕೇಳಿಸಬೇಕು. ಅಂಬೆಗಾಲಿಕ್ಕುತ್ತಾ ಮನೆ ತುಂಬಾ ಕಂದಮ್ಮಗಳು ಒಡಾಡಬೇಕು. ಅವರ ಬಾಲಬಾಷೆಯನ್ನು ಅರ್ಥೈಸಿಕೊಳ್ಳುತ್ತಾ ಅದನ್ನು ರಮಿಸಿ ಸಮಾಧಾನ ಪಡಿಸಿ ಸಂಭ್ರಮಿಸುವ ಕ್ಷಣಗಳಿಗೆ ಪ್ರತಿ ಹಿರಿಯರು ಕಾಯುತ್ತಿರುತ್ತಾರೆ. ಆದರೆ ಇಲ್ಲಿನ ಹಿರಿಯರು ತಮ್ಮ ಮೊಮ್ಮಕ್ಕಳ ಬಾಲಕಾಂಡ ವನ್ನು ಕಣ್ತುಂಬಿಕೊಳ್ಳುವ ಭಾಗ್ಯವನ್ನೇ ಕಳೆದುಕೊಂಡಿದ್ದಾರೆ.

ಮಗಳು ಅಥವಾ ಸೊಸೆ ಗರ್ಭಿಣಿಯಾದ ತಕ್ಷಣವೇ ಬೇರೆಡೆಗೆ ವರ್ಗಾವಣೆ ಮಾಡುತ್ತಾರೆ. ನವಜಾತ ಶಿಶುವಿಗೆ ಸಾಂಕ್ರಮಿಕ ರೋಗಗಳು ಭಾದಿಸದಿರಲಿ ಎಂಬ ಮುನ್ನೆಚ್ಚರಿಕೆ. ಸೊಸೆ ಅಥವಾ ಮಗಳ ಬಾಣಂತಿ ತನದ ಆರೈಕೆಗೆ ಪತ್ನಿ ಕೂಡ ಶಿಫ್ಟ್. ಮನೆಯ ಯಜಮಾನ ಏಕಾಂಗಿ.

See also  ಲಾಹೋರ್: ಇಮ್ರಾನ್ ದಾಳಿಕೋರ ಮಾದಕ ವ್ಯಸನಿ, ತನಿಖೆಯಿಂದ ಬಹಿರಂಗ

ಈ ಗಂಭೀರ ಸಮಸ್ಯೆ ಅರಿವಿಗೆ ಬಂದ ಮೇಲೆ ಅಲ್ಲಿನ ನಿವಾಸಿಗಳು ಸಮಸ್ಯೆ ಪರಿಹಾರಕ್ಕೆ ನಿರಂತರವಾಗಿ ಸೌಜನ್ಯದ ಹೋರಾಟ ನಡೆಸುತ್ತಲೇ ಬಂದಿದ್ದಾರೆ.  2013 ರಿಂದ ಸತತವಾಗಿ ಸಂಸದರು, ಶಾಸಕರು, ಕೌನ್ಸಿಲರ್ ಗಳು, ಜಿಲ್ಲಾಧಿಕಾರಿಗಳು ,
ತಹಶಿಲ್ದಾರರು, ಕಮಿಷನರ್ ಹೀಗೆ ಶಾಸಕಾಂಗ ಮತ್ತು ಕಾರ್ಯಾಂಗಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಐದು ವರ್ಷಗಳ ಕಾಲ ಈ ಪ್ರಕ್ರಿಯೆ ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸುಸಂಸ್ಕೃತರು, ವಿದ್ಯಾವಂತರು, ಸಜ್ಜನರು ಎಂಬ ಪಟ್ಟ ಇತ್ತಲ್ಲಾ ಹಾಗಾಗಿ ಇಲ್ಲಿನ ನಿವಾಸಿಗಳು ಬೀದಿಗಿಳಿದು ಹೋರಾಟ ಮಾಡಲೇ ಇಲ್ಲಾ.

ಕೊನೆಗೆ ನಿವಾಸಿಗಳು ಒಮ್ಮತಕ್ಕೆ ಬಂದು ನ್ಯಾಯಾಂಗ ಹೋರಾಟಕ್ಕೆ ಅಣಿಯಾದರು.2018 ರಲ್ಲಿ ಬಡಾವಣೆ ಯ ಸಮಿತಿ SRVK( ಸುಬ್ರಹ್ಮಣ್ಯ ನಗರ , ರೈಫಲ್ ರೇಂಜ್, ವಿದ್ಯಾನಗರ, ಕನ್ನಿಕಾ ಬಡಾವಣೆ ವೆಲ್ ಫೇರ್ ಅಸೋಸಿಯೇಷನ್) ರವರು ಅಧ್ಯಕ್ಷರಾದ ಮುಕ್ಕಾಟಿ ಪೂಣಚ್ಚ, ಕಾರ್ಯದರ್ಶಿ ನಾಳಿಯಂಡ ನಾಣಯ್ಯ ರವರನ್ನು ವಾದಿಗಳನ್ನಾಗಿಸಿ ಕೊಡಗು ಜಿಲ್ಲಾಡಳಿತ ಹಾಗೂ ಮಡಿಕೇರಿ ನಗರ ಸಭೆಯನ್ನು ಪ್ರತಿವಾದಿಗಳನ್ನಾಗಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೈಕೋರ್ಟ್ ವಕೀಲೆ ಪುಲಿಯಂಡ ಅನು ಚೆಂಗಪ್ಪ ರವರ ಮುಖೇನ ಕೇಸನ್ನು ದಾಖಲಿಸುತ್ತಾರೆ. ವ್ಯಾಜ್ಯಕ್ಕೆ ಸಂಭಂದಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿ ಪರಿಣಾಮಕಾರಿ ವಾದವನ್ನು ವಕೀಲೆ ಅನು ಚೆಂಗಪ್ಪ ಮಂಡಿಸುತ್ತಾರೆ. ಪ್ರತಿವಾದಿಗಳು ಕಸವಿಲೇವಾರಿಗೆ ಬದಲಿ ಸ್ಥಳ ಪತ್ತೆಯಾಗಿಲ್ಲಾ ಎಂಬ ಉತ್ತರವನ್ನು ಕೊರ್ಟ್ ಗೆ ಸಲ್ಲಿಸುತ್ತಾರೆ. ಆರನೇ ಬಾರಿಗೆ ವಾದಿಗಳ ಪರ ವಕೀಲರು ಸೂಕ್ತ ಜಾಗದ ಪತ್ತೆಗೆ ವಾದಿಗಳಿಗೆ ಅವಕಾಶಕ್ಕಾಗಿ ನ್ಯಾಯಾಲಯಕ್ಕೆ ಕೋರುತ್ತಾರೆ. ಸಮಸ್ಯೆಯ ಗಂಭೀರತೆಯನ್ನು ಅರ್ಥೈಸಿಕೊಂಡ ಗೌರವಾನ್ವಿತ ನ್ಯಾಯಾಧೀಶರು ವಾದಿಗಳಿಗೇ ಜಾಗವನ್ನು ಗುರುತಿಸುವ ಜವಾಬ್ದಾರಿ ನೀಡುತ್ತದೆ.

ಅದರಂತೆ ಮುಂದಿನ ಹಿಯರಿಂಗ್ ನಲ್ಲಿ ವಾದಿಗಳ ಪರ ವಕೀಲರು ಎರಡನೇ ಮೊಣ್ಣಂಗೇರಿ ಗ್ರಾಮಕ್ಕೆ ಸೇರಿದ ಸರ್ವೇ ನಂ 20/1 ರಲ್ಲಿ 1330 ಏಕರೆ ಸರ್ಕಾರಿ ಜಾಗವು ಜನವಸತಿ ಇಲ್ಲದಿರುವ ಪ್ರದೇಶದಲ್ಲಿ ಇರುವ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುತ್ತಾರೆ. ಇದನ್ನು ಪರಿಗಣಿಸಿ ನ್ಯಾಯಾಲಯ ಮುಂದಿನ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಡಳಿತ ಕ್ಕೆ 2020 ರಲ್ಲಿ ನಿರ್ದೇಶನ ನೀಡುತ್ತದೆ.

ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಅನೀಸ್ ಕಣ್ಮಣಿ ಜಾಯ್ ರವರು ಹೆಚ್ಚಿನ ಕಾಳಜಿ ವಹಿಸಿ ಸ್ಥಳ ಪರಿಶೀಲನೆ ನಡೆಸಿ ಹತ್ತು ಏಕರೆ ಜಾಗವನ್ನು ಮೀಸಲಿಡುತ್ತಾರೆ.ಅರಣ್ಯ ಇಲಾಖೆಯ ಒಪ್ಪಿಗೆ ,ತಹಶಿಲ್ದಾರರ ಒಪ್ಪಿಗೆ ಎಲ್ಲವೂ ಸಕಾಲದಲ್ಲಿ ದೊರೆಯುತ್ತದೆ.ಪ್ರಸ್ತುತ ಜಿಲ್ಲಾಧಿಕಾರಿಗಳಾಗಿರುವ ಡಾ.ಬಿ.ಸಿ. ಸತೀಶ್ ರವರು ಹೆಚ್ಚಿನ ಮುತುವರ್ಜಿಯಿಂದ ಇಲಾಖಾ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಇನ್ನೇನು ಕೆಲವೇ ದಿನಗಳಲ್ಲಿ ಅಲ್ಲಿನ ಜನರ ಭಗೀರಥ ಪ್ರಯತ್ನಕ್ಕೆ ಫಲ ದೊರೆಯಲಿದೆ.ವಿಷ ವರ್ತುಲದ ಚಕ್ರವ್ಯೂಹದಿಂದ ಸುಬ್ರಹ್ಮಣ್ಯ ನಗರ ಮತ್ತು ಸುತ್ತಲಿನ ಪ್ರದೇಶದ ಜನರು ಹೊರ ಬರಲಿದ್ದಾರೆ.ಶಾಪ ವಿಮೋಚನೆಯೊಂದಿಗೆ ಮನೆ ಮನೆಗಳಲ್ಲಿ ಕಂದಮ್ಮಗಳ ನಲಿವು ಕಾಣಿಸಲಿದೆ.ಬಾಣಲಿಯಲ್ಲಿ ಡ್ರೈ ಫಿಶ್ ಪ್ರೈ ಗೆ ಕ್ಷಣಗಣನೆ ಕೂಡಾ ಆಗಲಿದೆ ಮಧ್ಯದಲ್ಲಿ ಯಾವುದಾದರೂ ತಲೆ ಕೆಟ್ಟ ಅಧಿಕಾರಿ ಬಂದು ಅಡ್ಡಗತ್ತರಿ ಹಾಕದಿದ್ದರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು