ಮಡಿಕೇರಿ, ಡಿ.21: ನಗರದ ಕೋಟೆಯಲ್ಲಿ ನವೀಕರಣವಾಗುತ್ತಿರುವ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ನಿವೃತ್ತ ಮಾಹಿತಿ ಆಯುಕ್ತರಾದ ವಿರೂಪಾಕ್ಷಯ್ಯ ಪ್ರಾಚ್ಯವಸ್ತು ಇಲಾಖೆಯ ಅಧೀಕ್ಷಕರಾದ ಬಿಪಿನ್ ಚಂದ್ರನೇಗಿ, ಉಪ ಅಧೀಕ್ಷಕ ಎಂಜಿನಿಯರ್ ಸೋಮ್ಲ ನಾಯಕ್, ಇತರರು ಬುಧವಾರ ಭೇಟಿ ನೀಡಿ ವೀಕ್ಷಿಸಿದರು.
ಕೋಟೆಯಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿ ಸಂಬಂಧಿಸಿದಂತೆ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ನಗರದ ಕೋಟೆ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಸಂಬಂಧ ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಪ್ರ್ರಾಚ್ಯವಸ್ತು ಇಲಾಖೆಗೆ ತಿಳಿಸಲಾಗಿದೆ ಎಂದರು.
ಪ್ರಾಚ್ಯವಸ್ತು ಇಲಾಖೆಯ ಅಧೀಕ್ಷಕರಾದ ಬಿಪಿನ್ ಚಂದ್ರನೇಗಿ ಅವರು 2023 ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ಮಾಹಿತಿ ಆಯುಕ್ತರಾದ ವಿರೂಪಾಕ್ಷಯ್ಯ ಅವರು ಮಾತನಾಡಿ ರಾಜ್ಯ ಸರ್ಕಾರವು 10.93 ಕೋಟಿ ರೂ.ವನ್ನು ಕೋಟೆ ನವೀಕರಣಕ್ಕೆ ಬಿಡುಗಡೆ ಮಾಡಿದ್ದು, ಹಣ ಹಸ್ತಾಂತರಿಸಲಾಗಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಸಂಬಂಧ ರಾಜ್ಯ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು, ಅದರಂತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು, ಆದರೂ ಸಹ ತ್ವರಿತವಾಗಿ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ರಾಜರ ಗದ್ದುಗೆ ಅಭಿವೃದ್ಧಿಗೂ ಸಹ ಒತ್ತು ನೀಡಬೇಕಿದೆ ಎಂದು ಇದೇ ಸಂದರ್ಭದಲ್ಲಿ ವಿರೂಪಾಕ್ಷಯ್ಯ ಅವರು ತಿಳಿಸಿದರು.
ಬಳಿಕ ಕೋಟೆ ನವೀಕರಣ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಮಗಾರಿ ಟೆಂಡರ್, ಕಾಮಗಾರಿಯ ವಿವಿಧ ಹಂತಗಳು, ಮತ್ತಿತರ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.
ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ರೇಖಾ, ವಕೀಲರಾದ ಎನ್.ನರೇಂದ್ರ ಕಾಮತ್ ಇತರರು ಇದ್ದರು.