ಮಡಿಕೇರಿ: ಕೊಡವ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳಿಗಾಗಿ ಅಥವಾ 1956 ರ ಹಿಂದಿನ ಸ್ಥಿತಿಯನ್ನು ಕೊಡಗಿನಲ್ಲಿ ಮರುಸ್ಥಾಪಿಸುವುದಕ್ಕಾಗಿ ಅಧ್ಯಯನ ನಡೆಸಲು ಆಯೋಗವೊಂದನ್ನು ರಚಿಸಬೇಕೆಂದು ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಗೃಹ ಕಾರ್ಯದರ್ಶಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಕೊಡವ ಬುಡಕಟ್ಟು ಸಮುದಾಯವನ್ನು ಆಡಳಿತ ವ್ಯವಸ್ಥೆ ನಿರ್ಲಕ್ಷಿಸುತ್ತಿದ್ದು, ಕೊಡಗಿನಲ್ಲಿ 1956 ರ ಹಿಂದಿನ ಗತವೈಭವ ಮರುಸ್ಥಾಪಿಸಲು ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಕೊಡವ ಸಮುದಾಯವನ್ನು ಕಡೆಗಣಿಸುತ್ತಲೇ ಬಂದರೆ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿಯ ಕುರುಹು ಮರೆಯಾಗುವ ಎಲ್ಲಾ ಸಾಧ್ಯತೆಗಳಿದೆ. ಕಳೆದ ಹಲವು ವರ್ಷಗಳಿಂದ ನಂದಿನೆರವಂಡ ಯು.ನಾಚಪ್ಪ ಅವರ ನೇತೃತ್ವದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಈ ಸಂಘಟನೆಯ ಕಾನೂನು ಬದ್ಧ ಬೇಡಿಕೆಗಳನ್ನು ಪರಿಶೀಲಿಸಿ ಆಯೋಗವನ್ನು ರಚಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸವಿಂಧಾನದ 6 ನೇ ಶೆಡ್ಯೂಲ್ ಪ್ರಕಾರ ಕೊಡವ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳ ಅನುಷ್ಠಾನ, ಕೊಡವ ಬುಡಕಟ್ಟು ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು, ಸಿಖ್ ರ ಕಿರ್ಫಾಣ್ ಮಾದರಿಯಲ್ಲಿ ಕೊಡವ ಸಾಂಪ್ರದಾಯಿಕ ಜನಾಂಗೀಯ “ಸಂಸ್ಕಾರ ತೋಕ್” ಗನ್ ನ ಹಕ್ಕುಗಳನ್ನು ಸಂವಿಧಾನದ 25 ಮತ್ತು 26 ನೇ ವಿಧಿಗಳಡಿಯಲ್ಲಿ ರಕ್ಷಿಸಬೇಕು ಹಾಗೂ ಸ್ಥಳೀಯ ಭಾಷೆ ಅಂದರೆ “ಕೊಡವ ಥಕ್” ಅನ್ನು 8 ನೇ ಶೆಡ್ಯೂಲ್ನಲ್ಲಿ ಸೇರಿಸಬೇಕು. ಈ ಬೇಡಿಕೆಗಳನ್ನು ಈಡೇರಿಸಲು ಆಯೋಗ ರಚನೆ ಸೂಕ್ತ ಮಾರ್ಗವಾಗಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗಮನ ಸೆಳೆದಿದ್ದಾರೆ.
ಭಾರತವು ಸ್ವಾತಂತ್ರ್ಯವನ್ನು ಪಡೆದ ಸಮಯದಲ್ಲಿ 600 ರಾಜಪ್ರಭುತ್ವದ ರಾಜ್ಯಗಳು, ಅನೇಕ ಸಂರಕ್ಷಿತ ಪ್ರದೇಶಗಳು, 4 ಬ್ರಿಟಿಷ್ ಇಂಡಿಯಾ ಪ್ರೆಸಿಡೆನ್ಸಿಗಳು (ಬಾಂಬೆ, ಮದ್ರಾಸ್, ಕಲ್ಕತ್ತಾ ಮತ್ತು ಪಂಜಾಬ್) ಮತ್ತು ಹಲವಾರು ಬ್ರಿಟಿಷ್ ಇಂಡಿಯಾ ಪ್ರಾಂತ್ಯಗಳು ಅಸ್ತಿತ್ವದಲ್ಲಿದ್ದವು. ಕೊಡವ ಸಾಂಪ್ರದಾಯಿಕ ಹೋಮ್ ಕೂರ್ಗ್ ಪ್ರಾಂತ್ಯವು ಅವುಗಳಲ್ಲಿ ಒಂದಾಗಿತ್ತು. ಫ್ರೆಂಚ್ ಇಂಡಿಯಾ ವಸಾಹತುಗಳ ಜೊತೆಗೆ ಪಾಂಡಿಚೇರಿ, ಚಂದ್ರನಗರ ಮತ್ತು ಪೋರ್ಚುಗೀಸ್ ಇಂಡಿಯಾ ಕಾಲೋನಿ ಗೋವಾ ಕೂಡ ಅಸ್ತಿತ್ವದಲ್ಲಿತ್ತು. ಭಾರತವು ಸ್ವಾತಂತ್ರ್ಯ ಗಳಿಸಿದ ನಂತರ 562 ರಾಜಪ್ರಭುತ್ವದ ರಾಜ್ಯಗಳು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡವು.
1950 ರಲ್ಲಿ ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನಂತರ ಸಿ ಸ್ಟೇಟ್ ಆಕ್ಟ್, 1951 ರ ಅಡಿಯಲ್ಲಿ, ಕೂರ್ಗ್ನಲ್ಲಿ ಹೊಸ ಶಾಸಕಾಂಗ ಸಭೆ ಅಸ್ತಿತ್ವಕ್ಕೆ ಬಂದಿತು. ಸಂವಿಧಾನದ 242 ನೇ ವಿಧಿಯನ್ನು ಕೂರ್ಗ್ ರಾಜ್ಯಕ್ಕೆ ಪ್ರತ್ಯೇಕವಾಗಿ ಸೇರಿಸಲಾಯಿತು. ಸಂವಿಧಾನದ 7 ನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯ ಪಟ್ಟಿ ಮತ್ತು ಸಮಕಾಲೀನ ಪಟ್ಟಿಗೆ ಸೇರಿಸಲಾಯಿತು. ಕೊಡಗು ರಾಜ್ಯವು ಸಂಸತ್ತಿನ ಉಭಯ ಸದನಗಳಿಗೆ ಅಂದರೆ ರಾಜ್ಯಸಭೆ ಮತ್ತು ಲೋಕಸಭೆಗೆ ತಲಾ ಒಬ್ಬ ಪ್ರತಿನಿಧಿಗಳನ್ನು ಕಳುಹಿಸುವ ಅವಕಾಶವನ್ನು ಹೊಂದಿತ್ತು.
ಭಾಗ ‘ಸಿ’ ಸ್ಟೇಟ್ಸ್ ಆಕ್ಟ್ 1952 ರ ಪ್ರಕಾರ ಕೊಡವ ತಾಯ್ನಾಡು ಕೂರ್ಗ್ ಭಾರತದ ಏಕೈಕ ಸ್ವಾವಲಂಬಿ ರಾಜ್ಯವಾದ ಭಾರತೀಯ ಒಕ್ಕೂಟದ ಭಾಗ ‘ಸಿ’ ರಾಜ್ಯವಾಯಿತು. ಸರ್ದಾರ್ ವಲ್ಲಬಾಯಿ ಪಟೇಲ್ ಅವರು ಸಂಸತ್ತಿನಲ್ಲಿ ಕೂರ್ಗ್ ನ್ನು ಭಾರತದ ಏಕೈಕ ರಾಮರಾಜ್ಯ ಎಂದು ಹೆಮ್ಮೆಯಿಂದ ಕರೆದಿದ್ದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನವು ಅದರ ಅತ್ಯಗತ್ಯ ಹಂತದಲ್ಲಿದ್ದರೂ, ಕೊಡಗು ಶಾಂತಿಯುತ, ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತ ಸಂತೃಪ್ತ ರಾಜ್ಯಗಳಲ್ಲಿ ಒಂದಾಗಿತ್ತು. ಆದರೆ ರಾಜ್ಯ ಮರು ಸಂಘಟನೆ ಕಾಯಿದೆ, 1956 ರ ಅಡಿಯಲ್ಲಿ ವಿಶಾಲ ಮೈಸೂರಿನೊಂದಿಗೆ ಕೂರ್ಗ್ ವಿಲೀನಕ್ಕೆ ಕಾರಣವಾಯಿತು. ನಂತರ ಕರ್ನಾಟಕ ರಾಜ್ಯ ರಚನೆಯಾಯಿತು. 1952 ರಿಂದ 1956 ನವೆಂಬರ್ 1 ರವರೆಗೆ ಕೊಡಗು 24 ಸದಸ್ಯರ ವಿಧಾನಸಭೆ ಮತ್ತು ಸರ್ಕಾರವನ್ನು ಹೊಂದಿತ್ತು.