ಮಡಿಕೇರಿ: ಪೊನ್ನಂಪೇಟೆ ತಾಲೂಕು ಕುಟ್ಟ ಸಮೀಪದ ಪಲ್ಲೇರಿ ಎಂಬಲ್ಲಿ ಹುಲಿ ದಾಳಿಯಿಂದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಚೂರಿಕಾಡ್ ಗ್ರಾಮದ ನೆಲೀರ ಪೊಣ್ಣಚ ಅವರ ಮನೆಯಲ್ಲಿ ಕೆಲಸ ಮಾಡಲು ಬಂದಿದ್ದ ಪಿರಿಯಾಪಟ್ಟಣ ತಾಲೂಕು ಪಂಚವಳ್ಳಿ ಮೂಲದ ಚೇತನ್ (12) ತೋಟದ ಒಳಗೆ ಇದ್ದಾಗ ಹುಲಿ ದಾಳಿ ನಡೆಸಿದೆ.
ಹುಡುಗ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕಳೆದ ಕೆಲವು ವರ್ಷಗಳ ನಂತರ ಮಾನವನ ಮೇಲೆ ಹುಳಿ ದಾಳಿ ನಡೆದಿರುವ ಘಟನೆ ಇದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಮೃತದೇಹವು ಅರಣ್ಯದ ಆನೆ ಕಂದಕದಲ್ಲಿ ಇದ್ದು ಬೆಳಗ್ಗೆ ಕುಟ್ಟ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಕೆ ಜಿ ಬೋಪಯ್ಯನವರು ಆರ್ ಎಫ್ ಓ ಹಾಗೂ ಡೈರೆಕ್ಟರ್ ಜೊತೆ ಮಾತುಕತೆ ನಡೆಸಿ ಸ್ಥಳದಲ್ಲೇ ಎರಡೂವರೆ ಲಕ್ಷ ಹಣ ಪರಿಹಾರ ಸಂದಾಯಕ್ಕೆ ಸೂಚನೆ ಮತ್ತು ಈಗಿನಿಂದಲೇ ಹುಲಿ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲು ಹೇಳಿದ್ದಾರೆ.
ಪರಿಹಾರದ ಬಾಕಿ ಹಣ 15ಲಕ್ಷ ಶೀಘ್ರದಲ್ಲೆ ನೀಡಲು ಸೂಚನೆ ಕೊಟ್ಟಿದ್ದಾರೆ. ನಾಳೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ನರಹಂತಕ ಹುಲಿಯನ್ನು ಕೊಲ್ಲಲು ಶೂಟ್ ಅಟ್ ಸೈಟ್ ಆರ್ಡರ್ ಗಾಗಿ ಮನವಿ ಮಾಡುವುದಾಗಿ ಹೇಳಿದ್ದಾರೆ.