News Kannada
Friday, March 31 2023

ಮಡಿಕೇರಿ

ಕೊಡಗಿನಲ್ಲಿ ವ್ಯಾಘ್ರಗಳ ದಾಂಧಲೆ ಹೆಚ್ಚಳ: ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ದ ವೀಣಾ ಅಚ್ಚಯ್ಯ ಟೀಕೆ

Veena Achaiah criticises govt for not waking up to tiger attacks in Kodagu
Photo Credit : News Kannada

ಮಡಿಕೇರಿ: ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೊಡಗು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗುತ್ತಿದೆ. 2 ವರ್ಷಗಳಲ್ಲಿ 6 ಮಾನವಜೀವ ಹಾನಿ ಮತ್ತು ಅನೇಕ ಜಾನುವಾರುಗಳು ಸಾವನ್ನಪ್ಪಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಕೊಡಗಿನ ಜನರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ. ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಟೀಕಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಕಾ೯ರದ ವಿರುದ್ದ ಆರೋಪಗಳ ಸುರಿಮಳೆಗೈಯ್ದ ವೀಣಾ ಅಚ್ಚಯ್ಯ, ಕಾಡಾನೆಗಳು ತೋಟಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿದ್ದರೆ, ಹುಲಿಗಳು ಮನುಷ್ಯರನ್ನೇ ಆಹಾರ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ದುರಂತ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಗೆ ಕೋಟ್ಯಾಂತರ ಅನುದಾನ ಬರುತ್ತದೆ. ಆದರೆ ವನ್ಯಜೀವಿಗಳು ಆಹಾರವನ್ನು ಅರಸಿ ಜನವಾಸದ ಪ್ರದೇಶಗಳಿಗೆ ದಾಳಿ ಇಡುತ್ತಿವೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಕಳೆದ 25 ವರ್ಷಗಳಿಂದ ಬಿಜೆಪಿಯವರೇ ಶಾಸಕರುಗಳಾಗಿದ್ದಾರೆ. ಸಂಸದರು ಬಿಜೆಪಿಯವರೇ ಆಗಿದ್ದಾರೆ, ಆದರೆ ಕೊಡಗನ್ನು ಕಾಡುತ್ತಿರುವ ವನ್ಯಜೀವಿಗಳ ದಾಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಕ್ಕೆ ಯಾರೂ ಪ್ರಯತ್ನಿಸಿಲ್ಲ. ಆಡಳಿತ ಪಕ್ಷದಲ್ಲಿರುವವರು ವಿಧಾನಸಭೆಯಲ್ಲಿ ಹುಲಿ ಮದುವೆಗೆ ಅವಕಾಶ ಕೊಡಿ ಎಂದು ಒತ್ತಾಯ ಮಾಡುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕಾದ ಜನಪ್ರತಿನಿಧಿಗಳು ಕಾನೂನನ್ನು ಕೈಗೆತ್ತಿಕೊಳ್ಳುವ ರೀತಿಯ ಪ್ರಚೋದನಾಕಾರಿ ಒತ್ತಾಯಗಳನ್ನು ಮುಂದಿಡುವುದು ಎಷ್ಟು ಸರಿ. ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶಾಸಕರುಗಳು ಎಷ್ಟು ಸಭೆಗಳನ್ನು ನಡೆಸಿದ್ದಾರೆ ಎಂದು ಕೇಳಿದ ವೀಣಾ ಅಚ್ಚಯ್ಯ, ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯಾವ ರೀತಿಯ ಶಿಫಾರಸ್ಸುಗಳನ್ನು ಮಾಡಿದ್ದಾರೆ. ಸಂಸದರು ವನ್ಯಜೀವಿಗಳ ಸಮಸ್ಯೆ ಬಗ್ಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆಯೇ, ಅವರು ಮೈಸೂರಿಗೆ ಮಾತ್ರ ಸಂಸದರೇ, ಕೊಡಗಿನ ಜನರ ಮತಗಳು ಬೇಕು, ಇಲ್ಲಿನ ಸಮಸ್ಯೆಗಳಿಗೆ ಸ್ಪಂದನೆ ಬೇಡವೇ. ಅನೇಕ ಬಾರಿ ಹುಲಿ ದಾಳಿ ನಡೆದರೂ ಒಂದು ಬಾರಿಯೂ ಸಂಸದರು ಭೇಟಿ ನೀಡಿ ಗ್ರಾಮಸ್ಥರಿಗೆ ಸಾಂತ್ವನ ಹೇಳುವ ದೊಡ್ಡತನವನ್ನು ಪ್ರದರ್ಶಿಸಿಲ್ಲ. ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ವಿಶೇಷ ಸಭೆ ಕರೆದು ಯೋಜನೆ ರೂಪಿಸುವ ಕಾಳಜಿ ತೋರಿಲ್ಲ. ಇತರ ಜಿಲ್ಲೆಗಳಲ್ಲಿ ವನ್ಯಜೀವಿಗಳ ದಾಳಿಯಾದರೆ ತಕ್ಷಣ ಸ್ಪಂದಿಸುವ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರ ಪರವಾಗಿ ವಾದ ಮಂಡಿಸುತ್ತಾರೆ. ಆದರೆ ಕೊಡಗಿನ ಕೃಷಿಕ ವರ್ಗಕ್ಕೆ ಇಲ್ಲಿನ ಜನಪ್ರತಿನಿಧಿಗಳ ಬೆಂಬಲ ಸಿಗುತ್ತಿಲ್ಲ ಎಂದೂ ದೂರಿದರು.

ಹೊರಗಿನ ಹುಲಿಗಳು ಗಾಯಗೊಂಡು ನಿಸ್ತೇಜಗೊಂಡ ಹುಲಿಗಳೇ ದಕ್ಷಿಣ ಕೊಡಗು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜರೋಷವಾಗಿ ಮುಖ್ಯರಸ್ತೆಗಳಲ್ಲೇ ಸಂಚರಿಸುತ್ತಿವೆ. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಜಿಲ್ಲೆಯ ಹೊರ ಭಾಗದಿಂದ ಹುಲಿಗಳು ಕೊಡಗನ್ನು ಪ್ರವೇಶಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ಹುಲಿಗಳನ್ನು ಇಲ್ಲಿ ತಂದು ಬಿಡುತ್ತಿರುವ ಬಗ್ಗೆ ಜನರಲ್ಲಿ ಅನುಮಾನಗಳು ಮೂಡುತ್ತಿದೆ. ತಕ್ಷಣ ಅರಣ್ಯ ಇಲಾಖೆ ಹುಲಿದಾಳಿಯ ಕುರಿತು ಕೊಡಗಿನ ಜನರಿಗೆ ಸ್ಪಷ್ಟೀಕರಣ ನೀಡಬೇಕು ಎಂದು ವೀಣಾ ಒತ್ತಾಯಿಸಿದರು.

See also  ಚೆನ್ನೈ: 'ಮಾಂಡೌಸ್' ಚಂಡಮಾರುತ, ಐವರ ದುರ್ಮರಣ

ಜಿಲ್ಲೆಯಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು, ಬೇರೆ ಪ್ರದೇಶಗಳಿಂದ ಹುಲಿಯನ್ನು ತಂದು ಬಿಡಲಾಗುತ್ತಿದೆಯೇ, ಹುಲಿದಾಳಿಗೆ ಕಾರಣವೇನು, ಗಾಯಗೊಂಡಿರುವ ಹುಲಿಗಳೆಷ್ಟು, ಎಷ್ಟು ಹುಲಿಗಳನ್ನು ಸೆರೆ ಹಿಡಿಯಲು ಅನುಮತಿ ಪಡೆಯಲಾಗಿದೆ, ಮಾನವ ಜೀವಹಾನಿಯಾದ ತಕ್ಷಣ ಹುಲಿಸೆರೆಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ಕೊಡಗಿನಲ್ಲಿರುವ ಹುಲಿಗಳ ಬಗ್ಗೆ ಅರಣ್ಯ ಇಲಾಖೆ ಅಧ್ಯಯನ ನಡೆಸಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಬಹಿರಂಗ ಉತ್ತರವನ್ನು ಅರಣ್ಯ ಅಧಿಕಾರಿಗಳು ನೀಡಬೇಕು.

ಹುಲಿ ಮತ್ತು ಕಾಡಾನೆಗಳ ಉಪಟಳ ಹೆಚ್ಚು ಇರುವ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ವಿಶೇಷ ಸಭೆ ನಡೆಸಿ ವಿಶ್ವಾಸ ಮೂಡಿಸಬೇಕು. ವನ್ಯಜೀವಿಗಳ ಆತಂಕವಿರುವ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಅರಣ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ವನ್ಯಜೀವಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಕೇಂದ್ರ ಸರ್ಕಾರದ ಮೂಲಕ ಯೋಜನೆ ರೂಪಿಸಲು ಸಂಸದರು ಮುಂದಾಗಬೇಕು. ಎಂದು ಅವರು ಆಗ್ರಹಿಸಿದರು.

ಬಾಣೆ ಗೊಂದಲ ಈಗಾಗಲೇ ಇತ್ಯರ್ಥವಾಗಿರುವ ಬಾಣೆ ಜಾಗದ ವಿಚಾರದಲ್ಲಿ ಕಂದಾಯ ಸಚಿವರು ಮತ್ತೆ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಬಾಣೆ ಜಾಗ ನೀಡುವುದಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನೀಡಿದ ಹೇಳಿಕೆ ಅಧಿಕಾರಿಗಳಿಂದಾದ ತಪ್ಪಿನಿಂದಾಗಿ ಹೀಗಾಗಿದೆ ಎಂದು ಕೊಡಗಿನ ಜನಪ್ರತಿನಿಧಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಇದು ತಮ್ಮ ಸರ್ಕಾರದ ಒಬ್ಬ ಸಚಿವರನ್ನು ಜನರ ಟೀಕೆಯಿಂದ ರಕ್ಷಣೆ ಮಾಡುವ ಯತ್ನವಾಗಿದೆಯೇ ಹೊರತು ಜನರ ಮೇಲಿನ ಪ್ರೀತಿಯಿಂದಲ್ಲ. ಬಾಣೆ ಜಮೀನು ಹೊಂದಿರುವವರು ಈಗಾಗಲೇ ಆತಂಕಕ್ಕೊಳಗಾಗಿದ್ದು, ಖುದ್ದು ಕಂದಾಯ ಸಚಿವರೇ ಈ ಬಗ್ಗೆ ಬಹಿರಂಗ ಸ್ಪಷ್ಟೀಕರಣ ನೀಡಬೇಕು. ಕಂದಾಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಕೊಡಗಿನಲ್ಲಿ ವಿಶೇಷ ಸಭೆ ನಡೆಸಿ ಜನರ ಅಹವಾಲನ್ನು ಸ್ವೀಕರಿಸಬೇಕು ಎಂದು ವೀಣಾ ಒತ್ತಾಯಿಸಿದರು.

ರಸ್ತೆಗಳ ಅಭಿವೃದ್ಧಿ ಶೀಘ್ರ ಪೂರ್ಣಗೊಳಿಸಿ : ರಸ್ತೆಗಳ ಅಭಿವೃದ್ಧಿಗೆ ನಿಜವಾಗಿಯೂ ಸರ್ಕಾರ ಅನುದಾನ ನೀಡಿದೆಯೇ ಅಥವಾ ಇಲ್ಲವೇ ಎಂಬ ಸತ್ಯವನ್ನು ಶಾಸಕರು ಜನರ ಮುಂದಿಡಬೇಕು. ಕೊಡಗಿನ ಜನರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ಬಜೆಟ್ ನಲ್ಲಿ 100 ಕೋಟಿ ರೂ. ಘೋಷಿಸಿದಂತ್ತಿದೆ. ಕೇವಲ 100 ಕೋಟಿಗಳಲ್ಲಿ ಕೊಡಗಿನ ರಸ್ತೆಗಳ ಅಭಿವೃದ್ಧಿ ಸಾಧ್ಯವೇ. ಅಲ್ಪಪ್ರಮಾಣದ ಅನುದಾನವನ್ನು ಜಿಲ್ಲೆಯ ಶಾಸಕರುಗಳು ಯಾಕೆ ತಿರಸ್ಕರಿಸಲಿಲ್ಲ.ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಕಟ್ಟಡಗಳ ಕಾಮಗಾರಿ ಇನ್ನೂ ಕೂಡ ಪೂರ್ಣಗೊಳ್ಳದೆ ಅರ್ಧದಲ್ಲೇ ನಿಂತಿದೆ. ಕನ್ನಡ ಸುವರ್ಣ ಸಮುಚ್ಚಯ ಭವನ, ಕೊಡವ ಹೆರಿಟೇಜ್ ಕೇಂದ್ರ, ಹೆಚ್ಚುವರಿ ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಹಲವು ಕಟ್ಟಡಗಳು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಇವುಗಳನ್ನು ಪೂರ್ಣಗೊಳಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದರು.

ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರಿಗೆ ಇಚ್ಚಾಶಕ್ತಿಯ ಕೊರತೆ ಕಾಡುತ್ತಿದೆ. ಚುನಾವಣೆಗಳಲ್ಲಿ ಗೆಲುವು ಸಾಧಿಸುವುದಷ್ಟೇ ಇವರ ಅಜೆಂಡಾವಾಗಿದ್ದು, ಕೊಡಗಿನ ಜನರ ಹಿತ ಬೇಡವಾಗಿದೆ. ಜನರು ಕೂಡ ಇವರುಗಳಿಂದ ಬೇಸತ್ತಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದೂ ವೀಣಾ ಅಚ್ಚಯ್ಯ ಸುದ್ದಿಗೋಷ್ಟಿಯಲ್ಲಿ ಹೇಳಿದರು.

See also  ಮಡಿಕೇರಿ: ಮೇಕೇರಿಯಲ್ಲಿ ಗಮನ ಸೆಳೆದ ಆಟಿದ-ಕೂಟ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು