ಮಡಿಕೇರಿ: ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಸುಮಾರು 4.90 ಲಕ್ಷ ರೂ ವೆಚ್ಚದಲ್ಲಿ ನಗರಸಭಾ ನಿಧಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಮಡಿಕೇರಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 40 ಕೋಟಿ ರೂ ಬಿಡುಗಡೆಯಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ನಗರಸಭಾ ನಿಧಿಯಿಂದ 4.90 ಲಕ್ಷ ರೂ ವೆಚ್ಚದಲ್ಲಿ ಮಡಿಕೇರಿ ನಗರದ ಎಲ್ಲಾ ವಾರ್ಡ್‍ಗಳಲ್ಲಿ ‘ನಾಮಫಲಕ’ ಅಳವಡಿಸಲಾಗುತ್ತಿದೆ ಎಂದು ಅಪ್ಪಚ್ಚು ರಂಜನ್ ಅವರು ಮಾಹಿತಿ ನೀಡಿದರು.
2022-23 ನೇ ಸಾಲಿನ 15 ನೇ ಹಣಕಾಸು ಆಯೋಗದ ಅನುದಾನದಡಿ ನಗರಸಭೆಯ ಎಲ್ಲಾ ವಾರ್ಡ್‍ಗಳಲ್ಲಿ ಸುಮಾರು 11.84 ಲಕ್ಷ ರೂ ವೆಚ್ಚದಲ್ಲಿ ಎಲ್‍ಇಡಿ ಬೀದಿ ದೀಪ ಅಳವಡಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ವಿಕೇಂದ್ರಿಕೃತ ತ್ಯಾಜ್ಯ ಗೊಬ್ಬರ ಸಂಸ್ಕರಣ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ ಆಗುವುದರೊಳಗೆ ಪೂರ್ಣಗೊಳ್ಳಲಿವೆ ಎಂದು ಶಾಸಕರು ಹೇಳಿದರು.
ಮಡಿಕೇರಿ ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಆಯಾಯ ವಾರ್ಡಿನ ಸದಸ್ಯರು, ಅಧಿಕಾರಿಗಳು ಕಾಮಗಾರಿಗೆ ಸಂಬಂಧಿಸಿದಂತೆ ಗಮನಹರಿಸಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ, ನಗರಸಭೆ ಪೌರಾಯುಕ್ತರಾದ ವಿಜಯ್, ಪ್ರಾಂಶುಪಾಲರಾದ ವಿಜಯ್, ನಗರಸಭಾ ಸದಸ್ಯರು ಇತರರು ಇದ್ದರು.