ವಿರಾಜಪೇಟೆ: ಕೊಡವ ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗಕ್ಕೆ ಮುಜುಗರ ಉಂಟುಮಾಡುವವರಿಗೆ ಹಾಗೂ ಅವರುಗಳು ನೀಡುವ ಹೇಳಿಕೆಯನ್ನು ವೈಯಕ್ತಿಕ ಎಂದು ಭಾವಿಸಿದೆ, ಜನಾಂಗದ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗದ ಘನತೆಗೆ ಕುತ್ತು ತರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬ ಖಡಕ್ ಸಂದೇಶವನ್ನು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ನೀಡಿದೆ.
ಈ ಕುರಿತು ವಿರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಕೇಂದ್ರ ಕಚೇರಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಮೇಲಿನ ನಿರ್ಣಯವನ್ನು ಕೈಗೊಳ್ಳಲಾಯಿತು.
ಕೊಡವ ಜನಾಂಗದ ಕೆಲವರು ತಮ್ಮ ತಮ್ಮ ಸಂಘಟನೆಗಳು ಹಾಗೂ ತಾವು ಗುರುತಿಸಿಕೊಂಡಿರುವ ರಾಜಕೀಯ ಪಕ್ಷಗಳ ಮೂಲಕ ಹೇಳಿಕೆ ನೀಡುವಾಗ ಜನಾಂಗಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಇತರ ಜನಾಂಗ ಕೊಡವ ಜನಾಂಗವನ್ನು ಗೇಲಿ ಮಾಡುವ ಹಂತಕ್ಕೆ ತಲುಪಿದೆ, ಈ ದೇಶಕ್ಕೆ ಒಬ್ಬರು ಸೇನಾ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರು ಸೇರಿದಂತೆ ಅಸಂಖ್ಯಾತ ವೀರ ಸೇನಾಧಿಕಾರಿಗಳು ಹಾಗೂ ಕಲ್ಪನೆಗೆ ನಿಲುಕದಷ್ಟು ವೀರ ಯೋಧರನ್ನು ನೀಡುವ ಮೂಲಕ ಹಲವು ಪ್ರಥಮಗಳಿಗೆ ನಾಂದಿ ಹಾಡಿದ ಕೊಡವ ಜನಾಂಗ ಈ ದೇಶದಲ್ಲಿಯೇ ಹೆಮ್ಮೆಯ ಜನಾಂಗ ಎಂಬ ಹೆಗ್ಗಳಿಕೆ ಇದೆ.
ಭಾರತೀಯ ವಿದೇಶಾಂಗ ಸೇವೆಯನ್ನು (Indian Foreign Service) ಪ್ರವೇಶಿಸಿದ ಪ್ರಥಮ ಬಾರಿಗೆ ಪ್ರವೇಶಿಸಿದ ಕೀರ್ತಿ ಚೊನೀರ ಬಿ ಮುತ್ತಮ್ಮ ಅವರಿಗಿದೆ. ಕೊಡಗು ರಾಜ್ಯವಾಗಿದ್ದ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದವರು ಚೆಪ್ಪುಡೀರ ಎಂ ಪೂಣಚ್ಚ, ನಂತರ ದಿನಗಳಲ್ಲಿ ಒರಿಸ್ಸಾ ರಾಜ್ಯದ ರಾಯಭಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಜನಾಂಗಕ್ಕೆ ಇದೆ. ದೇಶದ ಭದ್ರತೆಯಲ್ಲಿ ತಮ್ಮ ಛಾಪನ್ನು ಒತ್ತಿದ ಕೋದಂಡ ಜಿ ಸೋಮಯ್ಯ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೆ ಬಲಿದಾನ ಮಾಡಿದ ಕೊಳೇರ ಕಾವೇರಿಯಂತ್ತಹ ಬಲಿದಾನಿಗಳು ಕೂಡ ಹಲವರಿದ್ದಾರೆ. ಬ್ರಿಟಿಷ್ ಯೂನಿಯನ್ ಜಾಕ್ ಬಾವುಟವನ್ನು ಕೆಳಗಿಳಿಸುವ ಮೂಲಕ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದರಿಂದ ಹಿಡಿದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನ್ಯಾಯಾಧೀಶರ ಕುರ್ಚಿಯಲ್ಲೇ ಕುಳಿತು ನ್ಯಾಯಾಧೀಶರಿಗೆ ಶಿಕ್ಷೆಯನ್ನು ಸೂಚಿಸುವ ಮೂಲಕ ಕೆಚ್ಚೆದೆಯ ನನ್ನು ತೋರಿದವರು ಕೊಡವರೆ, ನನ್ನ ಹೆಸರನ್ನು ಕರೆಯಿರಿ ಅದುಬಿಟ್ಟು ಖೈದಿ ಸಂಖ್ಯೆಯನ್ನು ಕರೆಯಬೇಡಿ ಎಂದು ಗುಡುಗಿದ ಕೊಡವರ ಇತಿಹಾಸ ಹೇಳುತ್ತಾ ಹೋದರೆ ಪುಟಗಳೇ ಸಾಲದು ಹೀಗಿರುವಾಗ ಕೊಡವರ ಪೂರ್ವಾಪರ ತಿಳಿಯದೆ ಕೊಡವರನ್ನು ಅವಹೇಳನ ಮಾಡುವುದು ಎಷ್ಟು ಸರಿ ಎಂದು ಸಭೆ ಕಿಡಿಕಾರಿತು.
ಕೊಡವ ಜನಾಂಗದ ಕೆಲವರು ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬಂತ್ತು. ನಮ್ಮವರೇ ನೀಡುತ್ತಿರುವ ಒಂದೊಂದು ಅಸಂಬದ್ಧ ಹೇಳಿಕೆಗಳಿಂದ ಜನಾಂಗ ಮುಜುಗರಕ್ಕೀಡಾಗುವ ಪ್ರಸಂಗ ಎದುರಾಗಿರುವುದು ದುರಂತ. ಈ ಕೂಡಲೇ ನಮ್ಮ ಜನಾಂಗದ ಪ್ರಮುಖರು ಕೊಡವ ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕಿದೆ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಹಾಗೇ ಯಾರೋ ವೈಯಕ್ತಿಕವಾಗಿ ನೀಡುವ ಹೇಳಿಕೆಗಳಿಗೆ ಇದು ಜನಾಂಗದ ಹೇಳಿಕೆ ಎಂಬಂತೆ ಇತರ ಜನಾಂಗ ಕೂಡ ಕೊಡವ ಜನಾಂಗದ ವಿರುದ್ಧ ಹರಿಹಾಯುತ್ತಿದ್ದು, ಬಾಯಿಗೆ ಬಂದಂತೆ ಜನಾಂಗವನ್ನು ನಿಂದಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅವರುಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೂಡ ಅಖಿಲ ಕೊಡವ ಸಮಾಜ ನೀಡಿದೆ.
ಜನಾಂಗದ ಯಾವುದೇ ವ್ಯಕ್ತಿಗಳು ಅಥವಾ ಅವರು ಪ್ರತಿನಿಧಿಸುವ ಸಂಘ ಸಂಸ್ಥೆ ಅಥವಾ ರಾಜಕೀಯ ಪಕ್ಷಗಳಡಿಯಲ್ಲಿ ನೀಡುವ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆ ಹೊರತು ಅದು ಸಂಪೂರ್ಣ ಜನಾಂಗದ ಹೇಳಿಕೆ ಅಲ್ಲಾ ಎಂಬುದನ್ನು ಇತರ ಜನಾಂಗ ಕೂಡ ಮನದಟ್ಟು ಮಾಡಿಕೊಳ್ಳಬೇಕಿದೆ. ಜಿಲ್ಲೆಯಲ್ಲಿ ಅಥವಾ ರಾಜ್ಯದಲ್ಲಿ ಮಾತ್ರವಲ್ಲ ಈ ದೇಶದಲ್ಲಿ ಹಲವು ಜನಾಂಗಗಳ ಹಲವಾರು ಸಂಘ, ಸಂಸ್ಥೆ, ಸಂಘಟನೆಗಳು ಇದ್ದು, ಇವು ಎಲ್ಲಾವು ಆಯಾಯ ಜನಾಂಗವನ್ನು ಪ್ರತಿನಿಧಿಸುವ ಸಂಸ್ಥೆ ಆಗಿರುವುದಿಲ್ಲ. ಬದಲಾಗಿ ಆಯಾಯ ಜನಾಂಗದ ಅಭಿವೃದ್ಧಿ ಹಾಗೂ ಏಳಿಗೆಗೆ ಪೂರಕವಾಗಿ ದುಡಿಯುವ ಹಾಗೂ ಅವರುಗಳ ಪರಿವ್ಯಾಪ್ತಿಯೊಳಗೆ ಬರುವ ಸಂಘಟನೆಗಳಾಗಿರುತ್ತದೆ ಹೊರತು ಸಂಪೂರ್ಣ ಒಂದು ಜನಾಂಗವನ್ನೇ ಪ್ರತಿನಿಧಿಸುವ ವ್ಯಕ್ತಿ ಅಥವಾ ಸಂಘಟನೆ ಆಗಿರುವುದಿಲ್ಲ. ಹಾಗೇ ಕೊಡವ ಜನಾಂಗದಲ್ಲಿ ಕೂಡ ಹಲವಾರು ಸಂಘ, ಸಂಸ್ಥೆ, ಸಂಘಟನೆಗಳಿದ್ದು ಅವರವರ ಕಾರ್ಯವ್ಯಾಪ್ತಿಯೊಳಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ, ಜನಾಂಗದ ಒಳಿತಿಗಾಗಿ ಅವರು ಕೂಡ ಶ್ರಮಿಸುತ್ತಿದ್ದಾರೆ ಹೊರತು, ಅವರು ನೀಡುವ ಅಸಂಬದ್ಧ ಹೇಳಿಕೆಗಳಿಗೆ ಸಂಪೂರ್ಣ ಕೊಡವ ಜನಾಂಗ ಹೊಣೆಗಾರರಲ್ಲ.
ಅವರು ಸಂಪೂರ್ಣ ಕೊಡವ ಜನಾಂಗವನ್ನು ಪ್ರತಿನಿಧಿಸುವ ಸಂಸ್ಥೆಯೂ ಕೂಡ ಅಲ್ಲವೆಂದು ಸಭೆಯಲ್ಲಿ ಮಾತು ಕೇಳಿಬಂತು, ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಿ ಇನ್ನು ಮುಂದೆ ಕೊಡವರ ವಿರುದ್ಧ ಯಾವುದೇ ಪ್ರಚೋದನಕಾರಿ ಅಥವಾ ಅಪಮಾನಕಾರಿ ಹೇಳಿಕೆ ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಭೆ ತಿರ್ಮಾನಿಸಿತು. ಹಾಗೇ ಜನಾಂಗದ ಪ್ರತಿನಿಧಿಗಳು ಯಾರೇ ಇರಲಿ ಜನಾಂಗದ ಗೌರವವನ್ನು ಎತ್ತಿಹಿಡಿಯುವ ಹೇಳಿಕೆಗಳನ್ನು ನೀಡಬೇಕು ಹೊರತು ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗ ತಲೆ ತಗ್ಗಿಸುವಂತಹ ಹೇಳಿಕೆ ನೀಡಿದ್ದರೆ ಮುಂದಾಗುವ ಕಷ್ಟ ನಷ್ಟಕ್ಕೆ ಅವರೇ ಹೊಣೆಗಾರರು ಹೊರತು ಜನಾಂಗವಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅಖಿಲ ಕೊಡವ ಸಮಾಜ ನೀಡಿದೆ.
ಈ ಸಂದರ್ಭದಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.