ಮಡಿಕೇರಿ : ಮಂತರ್ ಗೌಡ ಹಾಗೂ ಪೊನ್ನಣ್ಣ ಕೊಡಗಿನ ಆಸ್ತಿ. ಅವರನ್ನು ಕಳೆದುಕೊಳ್ಳದೆ , ಕಳಂಕ ರಹಿತ, ಭ್ರಷ್ಟಾಚಾರ ರಹಿತ, ಉತ್ಸಾಹಿ ಸಮಾಜ ಸೇವಕರನ್ನು ಈ ಬಾರಿ ಕೊಡಗಿದ ಜನತೆ ಆರಿಸಿ ಕಳುಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕರೆ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಮಂತರ್ ಗೌಡ ಅವರು ನಾಮಪತ್ರ ಸಲ್ಲಿಸಿದ ನಂತರ ಗಾಂಧಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್ ಈ ಬಾರಿ ಕೊಡಗಿನಲ್ಲಿ ನೂರಕ್ಕೆ ನೂರರಷ್ಟು ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಡನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹೊರಬೇಕು, ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು. ಭ್ರಷ್ಟಾಚಾರ,ಬೆಲೆ ಏರಿಕೆ ಇವುಗಳ ಬಗ್ಗೆ ಅವರೊಂದಿಗೆ ಚರ್ಚಿಸಿ ಅವರನ್ನು ಒಲಿಸಿಕೊಳ್ಳಬೇಕು ಎಂದರು.
ತೆನೆ ಗದ್ದೆಯಲ್ಲಿದ್ದರೆ ಚಂದ, ತಾವರೆ ಕೆರೆಯಲ್ಲಿದ್ದರೆ ಅಂದ, ಕೈ ಸೇವೆ ಮಾಡಲು ಸಮಾಜದಲ್ಲಿದ್ದರೆ ಚಂದ ಎಂದು ರೈತರು ಒಬ್ಬರು ಸಂದೇಶವನ್ನು ಕಳಿಸಿರುವ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಹಾಗೂ ಉಪಮುಖ್ಯಮಂತ್ರಿಯಾಗಿದ್ದಂತ ಸವದಿ ಅವರು ಕಾಂಗ್ರೆಸಿಗೆ ಸೇರ್ಪಡೆ ಯಾದ ನಂತರ ಪಕ್ಷ ಬಲ ಹೆಚ್ಚಿದ್ದು ಈ ಬಾರಿ 150 ಸೀಟ್ ಕಾಂಗ್ರೆಸ್ ಪಡೆದುಕೊಂಡು ಆಡಳಿತ ನಡೆಸುತ್ತದೆ ಎಂದು ಡಿಕೆ ಶಿವಕುಮಾರ್ ಭವಿಷ್ಯ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಎರಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಜಿಲ್ಲೆಯ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಮುಂತಾದವರು ಉಪಸ್ಥಿತರಿದ್ದರು, ಸಮಾವೇಶದಲ್ಲಿ ಅಸಂಖ್ಯ ಕಾರ್ಯಕರ್ತರು ನೆರೆದಿದ್ದು ವಿಶೇಷವಾಗಿತ್ತು.