News Kannada
Wednesday, October 04 2023
ಮಡಿಕೇರಿ

ಪ್ರವಾಸಿಗರ ಜತೆ ಅನುಚಿತವಾಗಿ ವರ್ತಿಸಿದರೆ ಕಠಿಣ ಕ್ರಮ: ಕೆ.ರಾಮರಾಜನ್ ಎಚ್ಚರಿಕೆ

Strict action will be taken against tourists if they misbehave with tourists: K Ramarajan
Photo Credit : News Kannada

ಮಡಿಕೇರಿ: ಜಿಲ್ಲೆಯ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜೊತೆಗೆ ಸೌಜನ್ಯ, ವಿನಯದಿಂದ ನಡೆದುಕೊಳ್ಳಬೇಕು, ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತಿಸಿದರೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಎಚ್ಚರಿಸಿದ್ದಾರೆ.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಿಂದ ಮುಂದಿನ 10 ದಿನದೊಳಗೆ ಜಿಲ್ಲೆಯ ಪ್ರತಿಯೊಂದು ಪ್ರವಾಸಿ ತಾಣದಲ್ಲಿ ‘ಪ್ರವಾಸಿ ಫಲಕ’ ಅಳವಡಿಸಲಾಗುವುದು. ಹಾಗೆಯೇ ಮುಖ್ಯ ಹೆದ್ದಾರಿಗಳಲ್ಲಿಯೂ ಸಹ ಸೂಚನಾ ಫಲಕ ಅಳವಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು.

ಕೊಡಗು ಜಿಲ್ಲೆಗೆ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಂತವರನ್ನು ಯಾವ ರೀತಿ ಕಾಣಬೇಕು ಎಂಬುದು ತಿಳಿದಿರಬೇಕು. ಅದನ್ನು ಬಿಟ್ಟು ಪ್ರವಾಸಿಗರ ಜೊತೆ ಕೆಟ್ಟದಾಗಿ ವರ್ತಿಸಿದರೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿದೆ ಎಂದು ಖಡಕ್ ಆಗಿ ನುಡಿದರು.

‘ಪ್ರವಾಸಿ ತಾಣಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಪೊಲೀಸ್ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಕೋರಿದರು.

ಹಳದಿ ಮತ್ತು ಬಿಳಿ ಬಣ್ಣ ಫಲಕದ ವಾಹನಗಳ ನಡುವಿನ ಕಿತ್ತಾಟ ನಿಲ್ಲಬೇಕು. ಕೊಡಗು ಜಿಲ್ಲೆಗೆ ಕೆಟ್ಟ ಹೆಸರು ಬರದಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಾಕೀತು ಮಾಡಿದರು.

ಪೊಲೀಸ್ ಇಲಾಖೆಯಿಂದ ಹೋಮ್ ಸ್ಟೇಗಳಿಗೆ ಕಾಲಮಿತಿಯಲ್ಲಿ ಎನ್‍ಒಸಿ ನೀಡಲಾಗುತ್ತಿದೆ. ಗಾಂಜಾ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಜೊತೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಜಿಲ್ಲೆಯಲ್ಲಿ ಇತ್ತೀಚೆಗೆ ಅಬ್ಬಿಫಾಲ್ಸ್ ಬಳಿ ಪ್ರವಾಸಿಗರ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದರು.

ಅಬ್ಬಿ ಜಲಪಾತದ ಬಳಿಯ ವಾಹನ ನಿಲುಗಡೆಗೂ, ಬಸ್ ನಿಲುಗಡೆಗೂ ಒಂದುವರೆ ಕಿ.ಮೀ. ದೂರವಿದೆ. ಪದೇ ಪದೇ ವಾಹನ ನಿಲುಗಡೆ ವಿಷಯದಲ್ಲಿ ಕದನ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹೇಳಿದರು.

ಡೀನ್ ಬೋಪಣ್ಣ ಅವರು ಮಾತನಾಡಿ ಸ್ಥಳೀಯ ಗ್ರಾ.ಪಂ.ವತಿಯಿಂದ ಕುಡಿಯುವ ನೀರು, ಶೌಚಾಲಯ ಹಾಗೂ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ನವೀನ್ ಅಂಬೆಕಲ್ಲು ಅವರು ಮಾತನಾಡಿ ಅಬ್ಬಿ ಜಲಪಾತಕ್ಕೆ ತೆರಳುವ ಮಾರ್ಗದ ರಸ್ತೆಯನ್ನು ವಿಸ್ತರಿಸಬೇಕು ಎಂದು ಸಲಹೆ ಮಾಡಿದರು. ಪ್ರಮುಖರಾದ ಎಂ.ಬಿ.ದೇವಯ್ಯ ಅವರು ಅಬ್ಬಿಜಲಪಾತಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು. ಜೊತೆಗೆ ಖಾಸಗಿ ವಾಹನಗಳಿಗೆ ವೇಗದ ಮಿತಿ ಅಳವಡಿಸಬೇಕು ಎಂದರು.

See also  ದೇವಟ್‌ ಪರಂಬನ್ನು ಹತ್ಯಾಕಾಂಡ ಸ್ಮರಣೆ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯ

ಕರ್ನಲ್ ಒಬ್ಬರು ಮಾತನಾಡಿ ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಇತ್ತೀಚೆಗೆ ಪ್ರವಾಸಿ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದೆ. ಆ ನಿಟ್ಟಿನಲ್ಲಿ ವಾಹನ ಪಾರ್ಕಿಂಗ್ ದರವನ್ನು ಹೆಚ್ಚಿಸಬೇಕು ಎಂದು ಅವರು ಸಲಹೆ ಮಾಡಿದರು.

ಸೋಮವಾರಪೇಟೆಯ ಮಲ್ಲೇಶ್ ಅವರು ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ಎಂದರೆ ಬರೀ ರಾಜಾಸೀಟು, ಅಬ್ಬಿ ಜಲಪಾತ, ಮಾಂದಲ್ ಪಟ್ಟಿ ಮಾತ್ರವಲ್ಲ, ಸೋಮವಾರಪೇಟೆ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳು ಇದ್ದು, ಅವುಗಳನ್ನು ಸಹ ಅಭಿವೃದ್ಧಿ ಪಡಿಸಬೇಕಿದೆ ಎಂದು ಅವರು ಕೋರಿದರು.

ಪ್ರಮುಖರಾದ ಮೊಂತಿ ಗಣೇಶ್ ಅವರು ಮಾತನಾಡಿ ಪ್ರವಾಸಿ ತಾಣಗಳಲ್ಲಿ ಗ್ರಾ.ಪಂ.ವತಿಯಿಂದಲೇ ಎಲ್ಲಾ ರೀತಿಯ ಮೂಲಸೌಲಭ್ಯ ಕಲ್ಪಿಸುವುದು, ಜೊತೆಗೆ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅವರು ಅಬ್ಬಿಜಲಪಾತದಲ್ಲಿ 4 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ 16 ರಿಂದ 18 ಸಾವಿರ ರೂ. ಸಂಗ್ರಹವಾಗುತ್ತಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಯತೀಶ್ ಉಲ್ಲಾಳ್, ಪ್ರಮುಖರಾದ ಭಾಸ್ಕರ್, ರೋಹಿತ್, ಜಗದೀಶ್, ಪ್ರಾದೇಶಿಕ ಸಾರಿಗೆ ಮಧುರ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು