News Karnataka Kannada
Thursday, April 25 2024
ಮಡಿಕೇರಿ

ಮೈಸೂರು-ಕುಶಾಲನಗರ ನಾಲ್ಕು ಪಥ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭ: ಪ್ರತಾಪ್ ಸಿಂಹ

Work on Mysuru-Kushalnagar four-lane highway to begin soon: Pratap Simha
Photo Credit : News Kannada

ಮಡಿಕೇರಿ: ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿಯ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸಂಸದರಾದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, 4,130 ಕೋಟಿ ರೂ. ವೆಚ್ಚದಲ್ಲಿ 93 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.

ಕುಶಾಲನಗರ-ಸಂಪಾಜೆ ಮಾರ್ಗದಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿ ವರದಿ ನೀಡಬೇಕು. ಇಂತಹ ಸ್ಥಳಗಳಲ್ಲಿ ಅಪಘಾತ ತಪ್ಪಿಸಲು ಅಗತ್ಯ ಕ್ರಮವಹಿಸುವಂತೆ ಹೆದ್ದಾರಿ ಇಲಾಖೆಯ ಎಂಜಿನಿಯರ್‍ಗಳಿಗೆ ಸಂಸದರು ಸೂಚಿಸಿದರು.

ಮದೆನಾಡು ಬಳಿಯ ಕರ್ತೋಜಿ ಗುಡ್ಡ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಮಣ್ಣು ರಸ್ತೆಗೆ ಬರುವ ಸಾಧ್ಯತೆ ಇದೆ. ಆದ್ದರಿಂದ ತಡೆಗೋಡೆ ನಿರ್ಮಿಸಬೇಕಿದೆ. ಈ ಸಂಬಂಧ ಎಂಜಿನಿಯರ್‍ಗಳು ಸೂಕ್ತ ಕ್ರಮವಹಿಸಬೇಕು. ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

ಸದ್ಯದಲ್ಲೇ ಮುಂಗಾರು ಆರಂಭವಾಗಲಿದ್ದು, 2018 ರಿಂದ ಇತ್ತೀಚೆಗೆ ಹೆಚ್ಚಿನ ಮಳೆಯಿಂದಾಗಿ ಹಾನಿಗಳು ಸಂಭವಿಸುತ್ತಿವೆ. ಪ್ರವಾಹ ಮತ್ತಿತರ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಡಚಣೆ ಉಂಟಾಗದಂತೆ ಗಮನಹರಿಸಬೇಕು. ಕರ್ತೋಜಿ ಬಳಿ ಗುಡ್ಡ ಕುಸಿತ ಹಾಗೂ ಕೊಯನಾಡು ಬಳಿ ಪ್ರವಾಹ ಉಂಟಾಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಮುಂಗಾರು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ವಿವಿಧ ಇಲಾಖಾ ಹಂತದಲ್ಲಿ ಹಾಗೆಯೇ ತಾಲ್ಲೂಕು ಮಟ್ಟದಲ್ಲಿಯೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ ಅವರು ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ಪ್ರಸ್ತಾಪಿಸಿ ಮಾತನಾಡಿ ತಡೆಗೋಡೆ ನಿರ್ಮಾಣ ಮಾಡಿದ ಟೆಂಡರ್‍ದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚಿಸಿದರು.

ಭಾಗಮಂಡಲ ಮೇಲುಸೇತುವೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡುವಂತೆ ಸಂಸದರಾದ ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

ಸರ್ಕಾರದ ವಿವಿಧ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನಿವೇಶನ ಹಾಗೂ ವಸತಿ ರಹಿತರಿಗೆ ವಸತಿ ಹಾಗೂ ನಿವೇಶನ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು ಎಂದರು.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಜಿಲ್ಲೆಯ ಆರು ಕಡೆಗಳಲ್ಲಿ ಆಶ್ರಯ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಸಂಬಂಧ ಆರು ಕಡೆಗಳಲ್ಲಿ ಸುಮಾರು 21 ಎಕರೆ ಭೂಮಿ ಗುರುತಿಸಲಾಗಿದೆ. ಆ ನಿಟ್ಟಿನಲ್ಲಿ ಗ್ರಾ.ಪಂ.ಮಟ್ಟದಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ ರಹಿತರನ್ನು ಗುರುತಿಸಿ ಹಂಚಿಕೆ ಮಾಡಬೇಕಿದೆ ಎಂದು ಹೇಳಿದರು.

ಮಾದಾಪುರ ಬಳಿಯ ಜಂಬೂರಿನಲ್ಲಿ ಈಗಾಗಲೇ ಪ್ರಾಕೃತಿಕ ವಿಕೋಪದಡಿ ನೀಡಲಾಗಿರುವ ಬಡಾವಣೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಿದೆ ಎಂದು ಶಾಸಕರಾದ ಮಂಥರ್‍ಗೌಡ ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಹೆದ್ದಾರಿಯಲ್ಲಿ ಟಿಂಬರ್ ಲಾರಿಗಳನ್ನು ನಿಯಂತ್ರಿಸಬೇಕು. ಮನೆ ನಿರ್ಮಾಣಕ್ಕೆ ಕೇರಳದಿಂದ ಜಲ್ಲಿ ಬರುತ್ತಿಲ್ಲ. ವಸತಿ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.

ನಗರ, ಪಟ್ಟಣ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಸಮರ್ಪಕ ವಿಲೇವಾರಿ ಸಂಬಂಧ ಮಾಹಿತಿ ಪಡೆಯುವಂತೆ ಸಂಸದರು ಸಲಹೆ ಮಾಡಿದರು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರು ಸಮರ್ಪಕ ನಿರ್ವಹಣೆ ಮಾಡಬೇಕು. ಕುಡಿಯುವ ನೀರು ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಸಂಸದರು ಸೂಚಿಸಿದರು.

‘ಜಲಜೀವನ್ ಮಿಷನ್ ಯೋಜನೆಯಡಿ ಪ್ರತೀ ಕುಟುಂಬಕ್ಕೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ 1.36 ಲಕ್ಷ ಮನೆಗಳ ಗುರಿಯಲ್ಲಿ ಈಗಾಗಲೇ 1.14 ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರತಾಪ್ ಸಿಂಹ ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ ಅವರು ಜಲಜೀವನ್ ಮಿಷನ್ ಯೋಜನೆ ಮತ್ತು ಅಮೃತ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪಬೇಕು ಎಂದು ಸಲಹೆ ಮಾಡಿದರು.

ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಹಲವು ಗ್ರಾಮಗಳ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆ ತಲುಪಬೇಕಿದೆ ಎಂದು ಹೇಳಿದರು.

ಕಾಫಿ ಬೆಳೆಗಾರರಿಗೆ 10 ಎಚ್‍ಪಿ ವರೆಗೆ ಉಚಿತ ವಿದ್ಯುತ್ ನೀಡಬೇಕು. ಈ ಕಾರ್ಯಕ್ರಮವನ್ನು ಸರಿಯಾಗಿ ಅನುಷ್ಠಾನ ಗೊಳಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‍ಗೆ ಸಂಸದರು ಸೂಚಿಸಿದರು. ಮಳೆಗಾಲದಲ್ಲಿ ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಇಇ ಅನಿತಾ ಬಾಯಿ ಅವರು 800 ವಿದ್ಯುತ್ ಕಂಬಗಳು ದಾಸ್ತಾನು ಇದೆ. ಸರ್ಕಾರ ಗ್ಯಾಂಗ್ ಮ್ಯಾನ್‍ಗಳನ್ನು ಪಡೆಯಲು ಅನುಮತಿ ನೀಡಿದೆ. ಈಗಾಗಲೇ 45 ಮಂದಿ ಗ್ಯಾಂಗ್‍ಮ್ಯಾನ್‍ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ದಕ್ಷಿಣ ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ವೋಲ್ಟೇಜ್ ಕಡಿಮೆಯಾಗುತ್ತಿದೆ ಹಾಗೂ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

ಶಾಸಕರಾದ ಮಂಥರ್ ಗೌಡ ಅವರು ಮಾತನಾಡಿ ಸುಂಟಿಕೊಪ್ಪ–ಮಾದಾಪುರ ವಿದ್ಯುತ್ ಮಾರ್ಗ ನಿರ್ಮಾಣ ಸಂಬಂಧ ಯಾವುದೇ ರೀತಿಯ ಅಡೆತಡೆ ಉಂಟಾಗದಂತೆ ಗಮನಹರಿಸಬೇಕು ಎಂದರು.

ಸುಂಟಿಕೊಪ್ಪ, ಚೌಡ್ಲು ಮತ್ತಿತರ ಗ್ರಾ.ಪಂ.ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ಲನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಆಯಾಯ ಸಂದರ್ಭದಲ್ಲಿ ಯಾಕೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಮಂಥರ್ ಗೌಡ ಅವರು ಪ್ರಶ್ನಿಸಿದರು.

ಶ್ರೀಮಂಗಲ ವಿದ್ಯುತ್ ಉಪ ಕೇಂದ್ರವನ್ನು ಜುಲೈ, 15 ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಆಹ್ವಾನಿಸುವಂತೆ ಕೆಇಬಿ ಎಂಜಿನಿಯರ್‍ಗೆ ಸಂಸದರು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅರ್ಹರಿಗೆ ಪೌಷ್ಠಿಕ ಆಹಾರ ವಿತರಿಸಬೇಕು. ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಂತೆ ನಿರ್ದೇಶನ ನೀಡಿದರು. ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಪಡಿತರ ಚೀಟಿ ನೀಡುವಂತೆ ಸಂಸದರು ಸೂಚಿಸಿದರು.

ಭಾರತ ಸಂಚಾರ ನಿಗಮದಿಂದ ಅಗತ್ಯವಿರುವ ಕಡೆಗಳಲ್ಲಿ ಟವರ್ ನಿರ್ಮಾಣ ಮಾಡಿ ಎಲ್ಲೆಡೆ ನೆಟ್‍ವರ್ಕ್ ಲಭ್ಯವಾಗುವಂತೆ ಮಾಡಬೇಕು ಎಂದು ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

ಮಳೆಗಾಲದಲ್ಲಿ ರಸಗೊಬ್ಬರ ಸೇರಿದಂತೆ ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ಪ್ರತಾಪ್ ಸಿಂಹ ಅವರು ಸಲಹೆ ಮಾಡಿದರು.

ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ನಾಗರಹೊಳೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ತಾತ್ಕಾಲಿಕ ಅಂಗನವಾಡಿ ನಿರ್ಮಾಣ ಮಾಡಿ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿಎಫ್‍ಒ ಶಿವರಾಮ್ ಬಾಬು, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು