ಮಂಡ್ಯ: ಮೈಷುಗರ್ ಕಾರ್ಖಾನೆ ಖಾಸಗಿಯವರ ಪಾಲಾಗಲು ಹೊರಟಿರುವುದು ರಾಜಕಾರಣಿಗಳ ಕುತಂತ್ರ, ಒಳಮನಸ್ಸು, ಕುಮ್ಮಕ್ಕು ಕಾರಣವಾಗಿದೆ. ಸಾರ್ವಜನಿಕರ ವಂತಿಗೆಯಿಂದ ಕಟ್ಟಿರುವ ಕಾರ್ಖಾನೆ ಹಾಗೂ ಕನ್ನಂಬಾಡಿ ಅನ್ಯರ ಪಾಲಾಗಲು ಬಿಡಬಾರದು. ಜನತೆ ಬದುಕು ಕಟ್ಟಿಕೊಳ್ಳಲು ಮೈಸೂರು ಅರಸರ ಕೊಡುಗೆ ಅಪಾರವಾಗಿದೆ ಎಂದು ಯಾಚೇನಹಳ್ಳಿ ಮಠದ ನಾಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮೈಸೂರು ಬೆಂಗಳೂರು ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಮೈಷುಗರ್ ಹೋರಾಟದ 26 ನೇ ದಿನದ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮೈಷುಗರ್ ಕಾರ್ಖಾನೆ ಮಾತ್ರವಲ್ಲ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಕಾಗದದ ಕಾರ್ಖಾನೆ, ಮುಂತಾದವುಗಳು ಸಹ ಮೈಸೂರು ಅರಸರ ಹಾಗೂ ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ನಿರ್ಮಿತವಾದವು. ಅಲ್ಲಿಯೂ ಸಹ ನಮ್ಮ ಜನ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಂದು ಸರ್ಕಾರ ದಳ್ಳಾಳಿಗಳ ಸಾಮ್ರಾಜ್ಯವಾಗಿದೆ. ಇದನ್ನು ಪ್ರಶ್ನೆ ಮಾಡುವವರು ಯಾರು? ನಮ್ಮಲ್ಲಿ ನಾಯಕತ್ವದ ಕೊರತೆಯಿದೆ. ಮೈಷುಗರ್ ಹೋರಾಟಕ್ಕೆ ಮಾತ್ರ ನಾವು ಸೀಮಿತರಾಗಬಾರದು. ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿಗಾರರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ರೈತರ ಕುಲ ಸಂಕಷ್ಟಕ್ಕೆ ಸಿಲುಕಿದೆ. ಅವರ ಸಮಸ್ಯೆಗಳು ನಮ್ಮ ಸಮಸ್ಯೆಗಳೇ ಆಗಿವೆ. ತುಂಡು ಬಟ್ಟೆ, ತುಂಡು ಜಮೀನು ಮಾತ್ರ ನಮಗೆ ಉಳಿದಿದೆ. ರೈತರ ಬದುಕು ಹೀನಾಯವಾಗಿದೆ. ಇಂತಹ ಧೂರ್ತರಿಂದ ನಮಗೆ ನ್ಯಾಯ ಸಿಗುವುದಿಲ್ಲ. ಇದನ್ನು ಪ್ರಬಲವಾಗಿ ವಿರೋಧಿಸಬೇಕು. ನನ್ನದು ಹೊರಬೆಂಬಲ ಮಾತ್ರವಲ್ಲ ಒಳಬೆಂಬಲವೂ ಇದೆ. ನಾನು ಸದಾ ರೈತರೊಂದಿಗೆ ಇರುತ್ತೇನೆ. ಸಂಪೂರ್ಣವಾಗಿ ನನ್ನ ಬೆಂಬಲ ಇದೆ ಎಂದು ತಿಳಿಸಿದರು. ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಚಳುವಳಿ ಜಿಲ್ಲೆಯ ಗಡಿ ದಾಟುತ್ತದೆ. ಜಿಲ್ಲೆಯ ರಾಜಕಾರಣಿಗಳು ಖಾಸಗಿ ಪರ ಲಾಬಿ ಮಾಡಿದರೆ ದೊಡ್ಡ ಸಂಘರ್ಷ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎಂ.ಎಲ್. ಭರತರಾಜ್ ಮಾತನಾಡಿ ಮಂಡ್ಯದ ಸಕ್ಕರೆ ಕಾರ್ಖಾನೆ ನಾಡಿನ ಸಂಕೇತ, ಜಿಲ್ಲೆಯ ಹೆಗ್ಗುರುತು, ಕಳಶಪ್ರಾಯ. ಕಾರ್ಖಾನೆಯ ಕಣಕಣದಿಂದಲೂ ಲಾಭ ಗಳಿಸಬಹುದಾಗಿದೆ. ರೈತರಿಗೆ ಸಿಹಿ ಉಣಿಸುತ್ತಿರುವ ಕಾರ್ಖಾನೆಯನ್ನು ಮಾರುವುದರ ಮೂಲಕ ಕಬ್ಬು ಬೆಳೆಗಾರರ ಕತ್ತು ಕೊಯ್ಯಲು, ಕಹಿ ತಿನ್ನಿಸಲು ಹೊರಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ತೆರಿಗೆ ಹಣದಿಂದ, ರೈತರ ಬೆವರಿನ ಹಣದಿಂದ ಕಟ್ಟಿರುವ ಸರ್ಕಾರಿ ಉದ್ದಿಮೆಗಳನ್ನು ಮಾರಲು ಹೊರಟಿರುವುದು ಖಂಡನೀಯ. ಸರ್ಕಾರ, ರಾಜಕಾರಣಿಗಳು ಸಕ್ಕರೆ ಲಾಬಿಗೆ ಮಣಿದಿದ್ದಾರೆ. ಜನಪರ ಮೌಲ್ಯಕ್ಕೆ ಬೆಲೆ ಕೊಡದೆ ಸರ್ಕಾರದ ಆಸ್ತಿ ಮಾರಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಧರಣಿ ಸಭೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ, ಜನವಾದಿ ಮಹಿಳಾ ಸಂಘಟನೆಯ ದೇವಿ ಮುಂತಾದವರು ಮಾತನಾಡಿದರು. ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಮಳವಳ್ಳಿ ತಾಲೂಕಿನ ಕಾರ್ಯಕರ್ತರು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಮ್, ಕೆ. ಬೋರಯ್ಯ, ತಗ್ಗಹಳ್ಳಿ ವೆಂಕಟೇಶ್, ಲಿಂಗರಾಜಮೂರ್ತಿ,ಮುದ್ದೇಗೌಡ,ಇಂಡುವಾಳು ಚಂದ್ರಶೇಖರ್ ಯಶ್ವಂತ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಸಿಐಟಿಯುನ ಸಿ. ಕುಮಾರಿ ಮಹಿಳಾ ಸಂಘಟನೆಯ ಮಂಜುಳಾ, ಸುನಿತಾ, ಸುಶೀಲ, ಜಯಶೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.