ಮಂಡ್ಯ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬೇರೊಂದು ಪಕ್ಷಕ್ಕೆ ಬೆಂಬಲ ಅಥವಾ ಸಹಕಾರ ನೀಡುವ ಬಗ್ಗೆ ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮಂಡ್ಯದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದೇನೆ. ಅಲ್ಲಿ ಎಲ್ಲ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುತ್ತೇನೆ ಎಂದರು.
ಈ ಕ್ಷಣದವರೆಗೂ ನಾನು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಕುಮಾರಸ್ವಾಮಿ ಅವರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ಈವರೆಗೂ ಬಿಜೆಪಿ ಅಧಿಕೃತವಾಗಿ ನಮ್ಮ ಬೆಂಬಲ ಕೇಳಿಲ್ಲ. ಯಡಿಯೂರಪ್ಪ ಅವರು ಮಾತ್ರ ಒಂದೆರಡು ಸಲ ಈ ಬಗ್ಗೆ ಮಾತನಾಡಿದ್ದಾರೆ ಎಂದರು.