ಮಂಡ್ಯ : ಶಿಕ್ಷಕ ಹುದ್ದೆಯ ನಿರೀಕ್ಷಿತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರವೇ 15 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳುವುದಾಗಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಶಾಲೆಯಲ್ಲಿ ಮೊಟ್ಟೆ ನೀಡುವ ವಿವಾದ ಬಗ್ಗೆ ಪ್ರತಿಕ್ರಿಯಿಸಿದರು. ಅಪೌಷ್ಟಿಕತೆಯಿಂದ ಮಕ್ಕಳು ತುಂಬಾ ಒದ್ದಾಡುತ್ತಿವೆ. ಹಾಗಾಗಿ ಮಕ್ಕಳಿಗೆ ಪ್ರೋಟೀನ್‌ಗಾಗಿ ಮೊಟ್ಟೆ ನೀಡಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ. ಮಕ್ಕಳಿಗೆ ಮೊಟ್ಟೆ ಜತೆ ಬಾಳೆ ಹಣ್ಣು ಕೂಡ ಕೊಡುತ್ತಿದ್ದೇವೆ. ಈ ಬಗ್ಗೆ ತಜ್ಞರು ಸಹ ಸಲಹೆ ನೀಡಿದ್ದಾರೆ. ಇನ್ನು ಪ್ರೋಟೀನ್ ಯುಕ್ತ ಪದಾರ್ಥ ಆಯ್ಕೆ ಮಾಡುತ್ತಿದ್ದೇವೆ. ತಜ್ಞರು ಒಪ್ಪಿದರೆ ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ’ ಎಂದರು.
ಇನ್ನು ‘ಕೊರೊನಾ ಕಾರಣದಿಂದ ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳನ್ನ ಮುಚ್ಚುವುದಿಲ್ಲ. 1.2 ಕೋಟಿ ಮಕ್ಕಳ ಪೈಕಿ 102 ಮಕ್ಕಳಿಗೆ ಮಾತ್ರ ಕೊರೊನಾ ಸೋಂಕು ದೃಢಪಟ್ಟಿದೆ. ವಸತಿ ಶಾಲೆಗಳಲ್ಲಿ ಮಾತ್ರ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನು ವಸತಿ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಸೋಂಕು ಕಂಡುಬಂದಿಲ್ಲ. ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೂಗೊಂಡು ಶಾಲೆಗಳನ್ನ ನಡೆಸ್ತೇವೆ. ಆದ್ರೆ, ಯಾವುದೇ ಕಾರಣಕ್ಕೂ ಶಾಲಾ ಕಾಲೇಜುಗಳು ಮುಚ್ಚಲ್ಲ. ಇನ್ನು ಶೀಘ್ರವೇ 15 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಪ್ರಕಟಿಸ್ತೇವೆ’ ಎಂದರು.