ಮಂಡ್ಯ : ಇದು ಜಾತ್ರೆಗಳ ಕಾಲವಾಗಿದ್ದು ಬಯಲು ಸೀಮೆಯಲ್ಲಿ ಒಂದಲ್ಲ ಒಂದು ಜಾತ್ರೆಗಳು ನಡೆಯುತ್ತಿದ್ದು, ಪ್ರತಿಯೊಂದು ಜಾತ್ರೆಯೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಈ ಜಾತ್ರೆಗಳಲ್ಲಿ ದೇವರ ಪೂಜೆ, ರಥೋತ್ಸವ ಮೊದಲಾದ ದೈವ ಆರಾಧನೆಯಿದ್ದರೂ ಅದರಾಚೆಗೆ ಜಾತ್ರೆಗಳೆಲ್ಲವೂ ರೈತಸ್ನೇಹಿಯಾಗಿದ್ದು ಇದಕ್ಕೆ ದನಗಳ ಜಾತ್ರೆ ಸಾಕ್ಷಿಯಾಗಿದೆ.
ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಾಲದಲ್ಲಿ ಸುಗ್ಗಿ ಕಾಲ ಮುಗಿಯುತ್ತಿದ್ದಂತೆಯೇ ಜಾತ್ರೆಗಳು ಆರಂಭವಾಗುತ್ತಿದ್ದವು. ಸುಗ್ಗಿಯ ಬಳಿಕ ಬೇಸಿಗೆ ಆರಂಭವಾಗುತ್ತಿದ್ದುದರಿಂದ ಕೃಷಿ ಚಟುವಟಿಕೆಗೆ ಸ್ವಲ್ಪ ಮಟ್ಟಿಗೆ ಬಿಡುವು ಸಿಗುತ್ತಿತ್ತು. ಜೊತೆಗೆ ಮನರಂಜನೆ ಹಾಗೂ ದೇವರ ಆರಾಧನೆಯೊಂದಿಗೆ ಮುಂದಿನ ಮುಂಗಾರು ಉತ್ತಮವಾಗಲೆಂದು ಜಾತ್ರೆಯಲ್ಲಿ ದೇವರನ್ನು ಪ್ರಾರ್ಥಿಸಲಾಗುತ್ತಿತ್ತು.
ದನಗಳೇ ರೈತರ ಜೀವನಾಧಾರವಾಗಿದ್ದರಿಂದ ಜಾತ್ರೆಯಲ್ಲಿ ದನಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ದೂರದ ಊರುಗಳಿಂದ ತಮ್ಮ ದನಗಳೊಂದಿಗೆ ಜಾತ್ರೆಗೆ ಬರುತ್ತಿದ್ದ ರೈತರು ಜಾನುವಾರುಗಳನ್ನು ಮಾರಾಟ ಮಾಡಿದರೆ, ಇನ್ನು ಕೆಲವರು ಜಾನುವಾರುಗಳನ್ನು ಖರೀದಿಸುತ್ತಿದ್ದರು.
ಇಂತಹ ದನಗಳ ಜಾತ್ರೆಗಳ ಪೈಕಿ ಹಲವು ಜಾತ್ರೆಗಳು ಇಂದಿಗೂ ಖ್ಯಾತಿಯಾಗಿದ್ದು, ಮೊದಲಿನಂತೆ ದನಗಳು ಜಾತ್ರೆಗೆ ಬರದಿದ್ದರೂ ಜಾತ್ರೆಗಳು ನಡೆಯುತ್ತಿವೆ. ಅದರಂತೆ ಜಿಲ್ಲೆಯ ನಾಗಮಂಗಲ ತಾಲೂಕಿನ ಇತಿಹಾಸ ಪ್ರಸಿದ್ಧವಾದ ದನಗಳ ಜಾತ್ರೆ ಕೋಟೆ ಬೆಟ್ಟದಲ್ಲಿ ಆರಂಭವಾಗಿದ್ದು, ಸರಳ ಸಂಪ್ರದಾಯವಾಗಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಮತ್ತು ಪ್ರಚಾರದ ಕೊರತೆಯಿಂದ ಹೆಚ್ಚಿನ ರೈತರು ಜಾತ್ರೆಗೆ ಬಾರದ್ದರಿಂದ ದನಗಳ ಜಾತ್ರೆ ಕಳೆಗುಂದಿರುವುದು ಎದ್ದು ಕಾಣುತ್ತಿದೆ.
ಪ್ರತಿವರ್ಷದಂತೆ ಈ ಬಾರಿಯೂ ತಾಲೂಕಿನ ಸುತ್ತಮುತ್ತ ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದರೂ ತಾಲೂಕು ಆಡಳಿತ ವತಿಯಿಂದ ಈ ಬಾರಿ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದಿರುವುದು ಜಾತ್ರೆಗೆ ಬಂದ ರೈತರಲ್ಲಿ ಬೇಸರ ತರಿಸಿದೆ. .
ಕೊರೊನಾ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಪೂಜಾ ವಿಧಿ-ವಿಧಾನಗಳನ್ನು ಮಾಡಲು ನಿಯಮಾನುಸಾರ ಅವಕಾಶ ನೀಡಿದ್ದು ಶ್ರೀ ವೆಂಕಟರಮಣ ಸ್ವಾಮಿಯ ರಥೋತ್ಸವ 16ರಂದು ಜರುಗಲಿದೆ. ಆದರೆ ದನಗಳ ಜಾತ್ರೆ ಈಗಿನಿಂದಲೇ ಆರಂಭವಾಗಿದ್ದು, ಕೆಲವೇ ಕೆಲವು ಜಾನುವಾರುಗಳು ಕಾಣಿಸುತ್ತಿವೆ. ಇದು ಜಾತ್ರೆ ಕಳೆಗುಂದಿರುವುದಕ್ಕೆ ಸಾಕ್ಷಿಯಾಗಿದೆ.