ಮಂಡ್ಯ: ‘ಐದು ರೂಪಾಯಿ ಡಾಕ್ಟರ್’ ಖ್ಯಾತಿಯ ಡಾ.ಶಂಕರೇಗೌಡ ಅವರು ಹೃದಯಾಘಾತದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಜೂ.19ರಂದು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.
ಮೇ 23ರಂದು ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತು.
ಈ ಹಿನ್ನೆಲೆಯಲ್ಲಿ ಮೇ 30ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ವೇಳೆ ಶಂಕರೇಗೌಡರಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಹೃದ್ರೋಗ ತಜ್ಞರು ಸೂಚಿಸಿದ್ದರು. ಹೃದ್ರೋಗ ತಜ್ಞರ ಸಲಹೆ ಮೇರೆಗೆ ಜೂ.19ರಂದು ಶಸ್ತ್ರ ಚಿಕಿತ್ಸೆಗೆ ಶಂಕರೇಗೌಡರು ಒಳಗಾಗಿದ್ದರು.
ಮಂಡ್ಯ ಜಿಲ್ಲೆಯಲ್ಲಿ ವೈದ್ಯರಾಗಿ, ರಾಜಕಾರಣಿಯಾಗಿ ತಮ್ಮ ಸರಳ ಸಜ್ಜಿನಿಕೆಯ ವ್ಯಕ್ತಿತ್ವದಿಂದ ಐದು ರೂಪಾಯಿ ಡಾಕ್ಟರ್ ಎಂದೇ ಶಂಕರೇ ಗೌಡ ಅವರು ಖ್ಯಾತಿ ಪಡೆದಿದ್ದಾರೆ. ಇವರು ಚಿಕಿತ್ಸೆಯ ಶುಲ್ಕವಾಗಿ ಮಂಡ್ಯದಲ್ಲಿರುವ ತಮ್ಮ ತಾರಾ ಕ್ಲಿನಿಕ್‌ನಲ್ಲಿ ಕೇವಲ 5 ರೂಪಾಯಿ ಪಡೆಯುತ್ತಾರೆ. ಇನ್ನು, ತಮ್ಮ ಊರಾದ ಶಿವಳ್ಳಿಗೆ ಬಂದ ರೋಗಿಗಳಿಗೆ ಯಾವುದೇ ಶುಲ್ಕ ಪಡೆಯದೆ ಉಚಿತ ಚಿಕಿತ್ಸೆ ನೀಡುತ್ತಾರೆ.
ಇದೇ ಕಾರಣದಿಂದಾಗಿ ಶಂಕರೇ ಗೌಡ ಅವರು ಮಂಡ್ಯ ಜಿಲ್ಲೆಯಲ್ಲಿ ಐದು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ದಿ ಪಡೆದಿದ್ದಾರೆ.