ಕೆ.ಆರ್.ಪೇಟೆ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಡುಹಗಲೇ ರೌಡಿಶೀಟರ್ ನನ್ನು ದೇವಾಲಯದ ಆವರಣದಲ್ಲಿಯೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಹನುಮಂತಪ್ಪ ಎನ್ನುವವರ ಪುತ್ರ ಅರುಣ ಆಲಿಯಾಸ್ ಅಲ್ಲು(38) ಕೊಲೆಯಾದ ವ್ಯಕ್ತಿ. ಕ್ರಿಮಿನಲ್ ಆರೋಪದ ಹಿನ್ನೆಲೆ ಹೊಂದಿದ್ದ ಅರುಣ ಸೋಮವಾರ ಬೆಳಿಗ್ಗೆ ಸುಮಾರು 9ಘಂಟೆಯ ಸಮಯದಲ್ಲಿ ಏಕಾಂಗಿಯಾಗಿ ಪಟ್ಟಣದ ಶ್ರವಣ ಬೆಳಗೊಳ ರಸ್ತೆಯಲ್ಲಿರುವ ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯಕ್ಕೆ ದೇವರ ದರ್ಶನಕ್ಕಾಗಿ ಆಗಮಿಸಿದ್ದ. ದೇವಾಲಯದ ಒಳಾವರಣದಲ್ಲಿಯೇ ಅರುಣನ ಮೇಲೆ ದಾಳಿ ಮಾಡಿದ ಸುಮಾರು 5 ಜನರಿದ್ದ ದುಷ್ಕರ್ಮಿಗಳ ಗುಂಪು ಆತನ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿ ಆ ನಂತರ ಕುತ್ತಿಗೆಯ ಭಾಗಕ್ಕೆ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿದೆ. ಹಲ್ಲೆಕೋರರ ದಾಳಿಯಿಂದ ಸ್ಥಳದಲ್ಲಿಯೇ ಅರುಣ ಮೃತಪಟ್ಟಿದ್ದು ಕೊಲೆ ಆರೋಪಿಗಳು ಪರಾರಿಯಾಗಿದ್ದಾರೆ.
ಪಟ್ಟಣದಲ್ಲಿ ಈ ಹಿಂದೆ ನಡೆದ ಒಂದೆರಡು ಕೊಲೆ ಪ್ರಕರಣಗಳಲ್ಲಿ ಅರುಣ ಆರೋಪಿಯಾಗಿದ್ದು ಜೈಲು ಸೇರಿದ್ದ. ಜೈಲಿನಲ್ಲಿದ್ದಾಗಲೇ ಸಂಚು ಮಾಡಿ ಪಟ್ಟಣದ ಪ್ರಮುಖ ವರ್ತಕನೊಬ್ಬನನ್ನು ಅಪಹರಿಸಿದ ಆರೋಪವೂ ಈತನ ಮೇಲಿದ್ದು, ವರ್ತಕನ ಅಪಹರಣಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಯೊಬ್ಬರಿಗೂ ಶಿಕ್ಷೆಯಾಗಿತ್ತು. ಕೊಲೆ, ಕೊಲೆ ಬೆದರಿಕೆ, ಅಪಹರಣ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳು ಅರುಣನ ಮೇಲಿವೆ. ಇತ್ತೀಚೆಗೆ ತಾನೆ ಜೈಲಿನಿಂದ ಬಿಡುಗಡೆಯಾಗಿದ್ದ ಅರುಣನನ್ನು ಪೊಲೀಸರು ಗಡಿಪಾರು ಮಾಡಿದ್ದರು. ಗಡಿಪಾರಾಗಿದ್ದರೂ ಪೊಲೀಸರ ಕಣ್ಣುತಪ್ಪಿಸಿ ಪಟ್ಟಣದಲ್ಲಿ ಅಡ್ಡಾಡುತ್ತಿದ್ದ ಅರುಣನ ಕೊಲೆಗೆ ಈತನ ವಿರೋಧಿ ಗುಂಪು ಹೊಂಚು ಹಾಕಿ ಸೋಮವಾರ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ದೇವಾಲಯದ ಒಳಾವರಣದಲ್ಲಿಯೇ ರೌಡಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ ಸುದ್ದಿ ಹರಡುತ್ತಿದ್ದಂತೆಯೇ ದೇವಾಲಯದ ಮುಂದೆ ಜನಸೇರಲಾರಂಭಿಸಿದರು. ಇದು ಪ್ರತೀಕಾರದ ಕೊಲೆಯಾಗಿದ್ದು ಪಟ್ಟಣದಲ್ಲಿ ಮತ್ತೆ ಕೊಲೆ ಸರಪಳಿ ಮುಂದುವರಿಯುವ ಭೀತಿ ಎದುರಾಗಿದೆ. ಕೊಲೆ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪೊಲೀಸರು ದೇವಾಲಯ ಮುಂದಿನ ಮುಖ್ಯ ದ್ವಾರವನ್ನು ಬಂದ್ ಮಾಡಿ ಜನರನ್ನು ನಿಯಂತ್ರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಶವ ಮೇಲೆತ್ತಲೂ ಅವಕಾಶ ನೀಡದೆ ಮೃತನ ಕುಟುಂಬಸ್ಥರು ತಡೆಯೊಡ್ಡಿದರು. ಪಿ.ಎಸ್.ಐ ಸುನೀಲ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕ ನಿರಂಜನ್ ನೇತೃತ್ವದ ಪೊಲೀಸರ ತಂಡ ಕುಟುಂಬಸ್ಥರ ಮನವೊಲಿಸಿ ಶವ ಪರೀಕ್ಷೆಗಾಗಿ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರಗೆ ಕೊಂಡೊಯ್ಯದ್ದರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿ.ವೈ.ಎಸ್.ಪಿ ನವೀನ್ ಕುಮಾರ್ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.