ಮಂಡ್ಯ: ಐಡಿಯಲ್ ಪಬ್ಲಿಕೇಶನ್ಸ್ ವತಿಯಿಂದ ಲೇಖಕಿ ಡಾ.ಶುಭಶ್ರೀ ಪ್ರಸಾದ್ ಅವರ ಮೂರು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಇದೇ ಸೆಪ್ಟಂಬರ್ 10ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ನಗರದ ಕರ್ನಾಟಕ ಸಂಘದಲ್ಲಿ ನಡೆಯಲಿರುವ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪ್ರಖ್ಯಾತ ಹಾಸ್ಯ ಲೇಖಕಿ ಮತ್ತು ನಿವೃತ್ತ ಪ್ರಾಧ್ಯಾಪಕರಾದ ಮಂಗಳೂರಿನ ಭುವನೇಶ್ವರಿ ಹೆಗಡೆ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ತೈಲೂರು ವೆಂಕಟಕೃಷ್ಣ ವಹಿಸಲಿದ್ದು, ಬೆಂಗಳೂರಿನ ಮನೋವಿಜ್ಞಾನಿ ಹಾಗೂ ಲೇಖಕಿ ಕಪಿಲಾ ಶ್ರೀಧರ್ ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ಶುಭಶ್ರೀ ಪ್ರಸಾದ್ ಅವರ ಮಂಜಿನ ಮಧುಪಾತ್ರೆ, ಹೂ ದಂಡೆಯ ಬೇಲಿ, ಕಲ್ಲು ಹಾಸಿನ ಮೇಲೆ ತಕಧಿಮಿ ಕೃತಿಗಳು ಬಿಡುಗಡೆಯಾಗಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಾಗಿರುವ ಲೇಖಕಿ ಶುಭಶ್ರೀ ಪ್ರಸಾದ್ ಬಹುಮುಖ ವ್ಯಕ್ತಿತ್ವದ ಪ್ರತಿಭೆ. ಲೇಖಕಿಯಾಗಿ ‘ಹಣತೆಬೆಳಕು’ ಕವನ ಸಂಕಲನ, ‘ಒಡಲ ಕರೆಗೆ ಓಗೊಟ್ಟು’ ಕಥಾಸಂಕಲನ ‘ಒಳಮನ’ ಪ್ರಬಂಧಗಳ ಸಂಕಲನ ಮುಂತಾದ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಮೈಸೂರು ವಿ.ವಿ. ಯಿಂದ ‘ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ’ ಕುರಿತು ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ. ಇವರು ಕವಿಯಾಗಿ, ನಿರೂಪಕಿಯಾಗಿ, ಭಾಷಣಕಾರರಾಗಿ ಹಲವಾರು ಸಭೆ-ಸಮಾರಂಭಗಳಲ್ಲಿ ಭಾಗವಹಿಸಿರುತ್ತಾರೆ. ದೃಶ್ಯಮಾಧ್ಯಮದಲ್ಲಿ ವಾರ್ತಾವಾಚಕಿಯಾಗಿ ಕೆಲಸ ಮಾಡಿದ್ದಾರೆ.