ಮಂಡ್ಯ: ಜಿಲ್ಲಾ ಪಂಚಾಯತಿ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಮಾನ್ಯ ಶಿಲ್ಪನಾಗ್ ರವರು ಮಹಾತ್ಮ ಗಾಂಧಿ ರಾಷ್ತ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 75ನೇ ಸ್ವಾತಂತ್ರ್ಯ ಅಮೃತ ಸರೋವರ ಕಾಮಗಾರಿ, ಶಾಲಾ ಆಟದ ಮೈದಾನ, ಶೌಚಾಲಯ, ಅಂಗನವಾಡಿ ಕೇಂದ್ರ, ಸ್ವಸಹಾಯ ಗುಂಪಿನ ನರ್ಸರಿ ಪ್ರಾರಂಭಿಸಿರುವ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ, ನಂತರ ಮದ್ದೂರು ಮತ್ತು ಮಳವಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಮತ್ತು ಯತ್ತಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಲುವೆ ಕಾಮಗಾರಿ ಮತ್ತು ಮದ್ದೂರು ತಾಲ್ಲೂಕಿನ ಹನೂರು, ಸಿ.ಎ.ಕೆರೆ ಮತ್ತು ಹೆಮ್ಮನಹಳ್ಳಿ ಗ್ರಾಮ ಪಂಚಾಯತಿಯ ಕಾಲುವೆ ಕಾಮಗಾರಿಗಳಿಗೆ ಭೇಟಿ ನೀಡಿ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು.
ನೀರಿನ ಮೂಲಗಳನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡಿ ಮುಂದಿನ ದಿನಗಳಲ್ಲಿ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಹಾಗಾಗಿ ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ಸಂಪನ್ಮೂಲಗಳನ್ನು ಬಳಸಿ ನೀರಿನ ಸಂಗ್ರಹಣೆ ಹಾಗೂ ಸಂರಕ್ಷಣೆ ಮಾಡಬೇಕಾದ್ದು ನಮ್ಮ ಜವಾಬ್ದಾರಿ ಎಂದರು.
ಕಾಲುವೆ ನಾಲಾಗಳನ್ನು ಅಭಿವೃದ್ಧಿಪಡಿಸಬೇಕು. ಒತ್ತುವರಿಯಾಗಿರುವ ಕಾಲುವೆಗಳನ್ನು ತೆರವುಗೊಳಿಸಿ ಜಲ ಸಂರಕ್ಷಣೆಗೆ ಕ್ರಮವಹಿಸಿ ಹಾಗೂ ಕಾಲುವೆ ಅಭಿವೃದ್ಧಿ ಪಡಿಸಿದ ಮೇಲೆ ಕಾಲುವೆ ನೀರಿನಿಂದ ಸುತ್ತಮುತ್ತಲಿನ ರೈತರ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ ಹಾಗೂ ಅಂತರ್ಜಲ ಮಟ್ಟವು ಹೆಚ್ಚುತ್ತದೆ ಎಂದರು. ಇದೇ ವೇಳೆ ಯತ್ತಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿ ಯಲ್ಲಿರುವ ಅಂಗನವಾಡಿ ಕೇಂದ್ರವನ್ನು ವೀಕ್ಷಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಾಂತ ಎಲ್ ಹುಲ್ಮನಿ ರವರು, ಉಪ ಕಾರ್ಯದರ್ಶಿಗಳು(ಅಭಿವೃದ್ಧಿ) ಸಂಜೀವಪ್ಪ ರವರು, ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಲಿಂಗಯ್ಯ ರವರು, ಸಹಾಯಕ ನಿರ್ದೇಶಕರಾದ(ಗ್ರಾ.ಉ) ದೀಪು ರವರು, ಪಿಆರ್ ಇಡಿ ಇಂಜಿನಿಯರ್ ಗಳು, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಡಿಪಿಸಿ, ತಾಲ್ಲೂಕು ಐಇಸಿ ಸಂಯೋಜಕರು, ಎಲ್ಲಾ ತಾಲ್ಲೂಕಿನ ನರೇಗಾ ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರುಗಳು, ಬಿಎಫ್ಟಿಗಳು ಹಾಗೂ ಇತರರು ಉಪಸ್ಥಿತರಿದ್ದರು.