ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ. ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ತೆಂಗಿನ ಮರದಲ್ಲಿ ಗೂಡು ಕಟ್ಡಿಕೊಂಡಿದ್ದ ಕಡಜದ ಹುಳುಗಳು ದಾಳಿ ಮಾಡಿದ ಪರಿಣಾಮ ಇಬ್ಬರು ರೈತರು ಮೃತಪಟ್ಟಿರುವ ಘಟನೆ ನಡೆದಿದೆ.
ನಾಗರಘಟ್ಟ ಗ್ರಾಮದ ನಾಗರಾಜೇಗೌಡ (65), ನಂಜಪ್ಪ(60) ಮೃತ ದುರ್ದೈವಿ ರೈತರು. ಕಳೆದ ಎರಡು ದಿನಗಳ ಹಿಂದೆ ತಮ್ಮ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ನಾಗರಾಜೇಗೌಡ, ನಂಜಪ್ಪ, ಕುಮಾರಸ್ವಾಮಿ ಅವರಿಗೆ ನೂರಾರು ಕಡಜದ ಹುಳುಗಳು ಕಚ್ಚಿದ ಕಾರಣ ಮೂರೂ ರೈತರು ಅಸ್ವಸ್ಥಗೊಂಡಿದ್ದರು. ಕೂಡಲೆ ಮೂವರನ್ನು ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ತೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಗರಾಜೇಗೌಡ ಮತ್ತು ನಂಜಪ್ಪ ಮೃತಪಟ್ಟಿದ್ದಾರೆ. ಮತ್ತೊರ್ವ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎರಡು ಕುಟುಂಬಗಳು ಬಡ ಕುಟುಂಬವಾಗಿದ್ದು ಜೀವನ ನಡೆಸಲು ತುಂಬಾ ತೊಂದರೆಯಾಗಿದೆ ಆದ್ದರಿಂದ ಸರ್ಕಾರವು ಇಬ್ಬರೂ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನಾಗರಘಟ್ಟ ಗ್ರಾಮಸ್ಥರು ಒತ್ತಾಯಿಸಿದ್ದಾರೆ.