ಮಂಡ್ಯ: ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಹಾಗೂ ಕ್ರಿಯಾಶೀಲ ಸಂಘಟಕ ಮಂಗಲದ ಟಿ. ಸತೀಶ್ ಜವರೇಗೌಡ ಅವರಿಗೆ ಹಾಸನದ ಮಾಣಿಕ್ಯ ಪ್ರಕಾಶನ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಘಟಕದ ವತಿಯಿಂದ ನೀಡಲಾಗುವ ‘ಮಾಣಿಕ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ‘ದೊರೆತಿದೆ ಎಂದು ಪ್ರಕಾಶಕ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.
ಯುವ ಬರಹಗಾರರ ಬಳಗದ ಮೂಲಕ ಕಳೆದ ಎರಡು ದಶಕಗಳಿಗೂ ಮಿಗಿಲಾಗಿ ಕನ್ನಡ ನಾಡು – ನುಡಿ, ಸಾಹಿತ್ಯ – ಸಂಸ್ಕೃತಿಯ ನೆಲೆಗಳನ್ನು ವಿಸ್ತರಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಘಟಿಸಿ ಆಯೋಜಿಸುವ ಮೂಲಕ, ಸಾವಿರಾರು ಉದಯೋನ್ಮುಖ ಹಾಗೂ ಯುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ಪರಿಚಯಿಸಿರುವ ಟಿ. ಸತೀಶ್ ಜವರೇಗೌಡರ ಸಂಘಟನಾ ಕ್ಷೇತ್ರದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕವಿ ಮತ್ತು ಸಂಟಕರಾಗಿರುವ ಸತೀಶ್ ಜವರೇಗೌಡ ಅವರು ಮಂಡ್ಯ ಮಾತ್ರವಲ್ಲದೆ, ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಬೆಂಗಳೂರಿನ ಕುವೆಂಪು ಸಾಂಸ್ಕೃತಿಕ ವೇದಿಕೆಯ ಮೂಲಕವೂ ಸಾಹಿತ್ಯ – ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತೊಡಗಿದ್ದಾರೆ. ಸಂಘಟನೆಯ ಜೊತೆಗೆ, ಸಾಹಿತ್ಯ ಕೃಷಿಯಲ್ಲಿಯೂ ನಿರತರಾಗಿರುವ ಇವರು, ಆರು ಕವನ ಸಂಕಲನಗಳು ಮತ್ತು ನಾಲ್ಕು ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಈ ವರೆಗೆ ಐವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆ ಹೊಂದಿದ್ದಾರೆ.
ನ. 20 ರಂದು ಬೆಳಗ್ಗೆ 10 ಗಂಟೆಗೆ ಹಾಸನದ ಸಂಸ್ಕೃತ ಭವನದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಬೋಧನಾ ಮತ್ತು ಸಂಶೋಧನಾ ಸಹಾಯಕರಾದ ಡಾ.ಎಚ್.ಕೆ. ಹಸೀನಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಆರನೆಯ ‘ಕವಿ – ಕಾವ್ಯ ಸಂಭ್ರಮ’ ದಲ್ಲಿ ಖ್ಯಾತ ಕವಯತ್ರಿ ಡಾ. ಶಶಿಕಲಾ ವಸ್ತ್ರದ ಹಾಗೂ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಸಂಘಟಕ ಸಜಗೌ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು.