ಭಾರತೀನಗರ: ಚರ್ಮಗಂಟು ರೋಗ ಕಾಣಿಸಿಕೊಂಡು ನಾಟಿ ಹಸುವೊಂದು ಸಾವನ್ನಪ್ಪಿರುವ ಘಟನೆ ಸಮೀಪದ ಅಣ್ಣೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಪ್ಪ (ಗುಡ್ಡಪ್ಪ) ಎಂಬುವವರಿಗೆ ಸೇರಿದ ನಾಟಿ ಹಸುವಿಗೆ ಕಳೆದ 10 ದಿನಗಳಿಂದ ಚರ್ಮಗಂಟು ರೋಗ ಕಾಣಿಸಿಕೊಂಡಿತು. ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದೆ. ಸ್ಥಳಕ್ಕೆ ಕೆ.ಎಂ.ದೊಡ್ಡಿ ಪಶುವೈದಾಧಿಕಾರಿ ಶಿವಶಂಕರ್, ಪಶುವೈದ್ಯ ಪರೀಕ್ಷಕ ಚನ್ನಪ್ಪ ಭೇಟಿನೀಡಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಒದಗಿಸಿಕೊಡುವ ಭರವಸೆಯನ್ನು ನೀಡಿ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಸೋಂಕಿತ ರಾಸುಗಳಿಗೆ ನಿರ್ಧಿಷ್ಟ ಚಿಕಿತ್ಸೆ ಇಲ್ಲ. ಆದರೂ ಆಂಟಿ ಬಯಾಟಿಕ್ ಮತ್ತು ನೋವು ನಿವಾರಕ ಲಸಿಕೆ ನೀಡಬಹುದು. ಹೊರ ರಾಜ್ಯಗಳಿಂದ ಚರ್ಮಗಂಟು ರೋಗ ಹರಡುತ್ತಿದೆ. ಉತ್ತರ ಕರ್ನಾಟಕ ಜಿಲ್ಲೆಗಳ ರೋಗ ಪೀಡಿತ ರಾಸುಗಳನ್ನು ಈ ಭಾಗದ ರೈತರು ಖರೀದಿಸಿ ತಂದಾಗ ಚರ್ಮಗಂಟು ಸ್ಥಳೀಯ ರಾಸುಗಳಿಗೆ ಹರಡುತ್ತಿವೆ. ಸೊಳ್ಳೆಗಳ ಕಡಿತದಿಂದ ಮಾತ್ರವಲ್ಲದೆ, ಗಾಳಿ ಮೂಲಕವು ಚರ್ಮಗಂಟು ರೋಗದ ವೈರಾಣುಗಳು ರಾಸುಗಳಿಂದ ರಾಸುಗಳಿಗೆ ಹರಡುತ್ತಿವೆ ಎಂದು ಪಶುವೈದ್ಯಾಧಿಕಾರಿ ಶಿವಶಂಕರ್ ತಿಳಿಸಿದ್ದು ಎಚ್ಚರವಾಗಿರುವಂತೆ ರೈತರಿಗೆ ತಿಳಿಸಿದ್ದಾರೆ.