ನಾಗಮಂಗಲ: ಅಮ್ಮನ ಕೈ ತುತ್ತು ಮಕ್ಕಳ ಜೀವಮಾನದ ಸಂತೃಪ್ತಿಯ ಸ್ವತ್ತು ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ನುಡಿದರು.
ನಾಗಮಂಗಲ ತಾಲೂಕಿನ ಬಿಜಿ ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಆಯೋಜಿಸಿದ್ದ ಮಾತೃ ಭೋಜನ ಎಂಬ ವಿಶಿಷ್ಟ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ತಾಯಿಯ ವಾತ್ಸಲ್ಯ ದೀಕ್ಷೆಯಿಂದ ಪಡೆಯುವ ಸಂಸ್ಕಾರ ಪ್ರತಿಯೊಬ್ಬ ವ್ಯಕ್ತಿಯನ್ನು ಬಹಳ ಎತ್ತರಕ್ಕೆ ಬೆಳೆಸುತ್ತದೆ. ಶ್ರೀ ಕೃಷ್ಣ ಪರಮಾತ್ಮ ಮತ್ತು ರುಕ್ಮಿಣಿ ದಂಪತಿ ಪಾಂಡವರನ್ನು ಊಟಕ್ಕೆ ಕರೆಯುವ, ಭೀಮನ ಉದರವನ್ನು ತೃಪ್ತಿಗೊಳಿಸುವ ತಾಯಿ ತುತ್ತಿನ ಘಟನೆಯನ್ನು ತಿಳಿಸುತ್ತಾ ಮಾತೃ ಭೋಜನದ ಮಹತ್ವವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರು ಮಾತನಾಡಿ ತಾಯಿಯು ತನ್ನ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಚಂದ್ರನನ್ನು ತೋರಿಸಿ ಊಟ ಮಾಡಿಸುತ್ತಿದ್ದ ಆ ಕಾಲ ಎಷ್ಟು ಅದ್ಭುತವಾಗಿತ್ತು. ಇಂದು ನೂರಾರು ಮಾತೆಯರು ತಮ್ಮ ಮನೆಯಿಂದ ತಂದ ಬುತ್ತಿಯನ್ನು ಇತರ ಮಕ್ಕಳಿಗೂ ಬಡಿಸಿ ತಾಯಿ ಪ್ರೇಮವನ್ನು ಮೆರೆದರು. ಇಂಥಹ ತಾಯಿ ಮಕ್ಕಳ ಸಂಗಮದ ಅಪೂರ್ವ ಕ್ಷಣವನ್ನು ನಾನು ಕಣ್ತುಂಬಿ ಕೊಂಡಿದ್ದೇನೆ. ಮತ್ತೊಮ್ಮೆ ನನ್ನ ತಾಯಿ ಉಣಬಡಿಸಿದಂತೆ ಎಲ್ಲಾ ಅಮ್ಮಂದಿರು ಉಪಚರಿಸಿದ್ದಾರೆ. ಇಂಥ ಕಾರ್ಯಕ್ರಮಕ್ಕೆ ಆಗಮಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ 7 ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರು ತಮ್ಮ ಮನೆಯ ವಿಶೇಷ ಆಹಾರದೊಂದಿಗೆ ಆಗಮಿಸಿ ಸಂಭ್ರಮಿಸಿದರು. ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ ಎ ಶೇಖರ್, ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ನಿವೃತ್ತ ಐಎಎಸ್ ಅಧಿಕಾರಿ ಚಿಕ್ಕಣ್ಣ, ಕರ್ನಾಟಕ ಜಾನಪದ ಪರಿಷತ್ ಮಾಜಿ ಅಧ್ಯಕ್ಷರಾದ ಟಿ.ತಿಮ್ಮೇಗೌಡ, ಟಿ ಸಿ ಎಸ್ ನ ಮುಖ್ಯಸ್ಥ ಡಾ. ಚಕ್ರವರ್ತಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ.ಟಿ.ಶಿವರಾಮು, ಮಾಡೆಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ವಿ ಪುಟ್ಟಸ್ವಾಮಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ. ಬಿ ರಮೇಶ್, ಡಾ. ಪ್ರಶಾಂತ್, ಪ್ರೊ. ಚಂದ್ರಶೇಖರ್ ಡಾ. ಬಿ ಕೆ ನರೇಂದ್ರ, ಡಾ. ಎಂ. ಜಿ. ಶಿವರಾಮು, ಪ್ರೊ. ಎನ್. ರಾಮು, ಹಣಕಾಸು ಅಧಿಕಾರಿ ಬಿ ಕೆ ಉಮೇಶ್, ಡಾ. ಕೆ. ಸಿ. ಯೋಗಾನಂದ ಹಾಜರಿದ್ದರು.