ಕೆ.ಆರ್.ಪೇಟೆ: ಮನೆಗೆ ನುಗ್ಗಿ ಚಿರತೆ ದಾಳಿ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಮನೆಯೊಳಗೆ ಸಿಲುಕಿಕೊಂಡಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಗ್ರಾಮದ ನಿವಾಸಿ ನಿಂಗೇಗೌಡ ಮತ್ತು ಗೌರಮ್ಮ ಎಂಬುವರ ಮೇಲೆ ದಾಳಿ ನಡೆಸಿದ್ದು ಗಾಯಗೊಂಡಿದ್ದಾರೆ. ನಿಂಗೇಗೌಡರ ತೋಟದ ಮನೆಗೆ ಆಹಾರ ಅರಸಿ ಬಂದ ಚಿರತೆಯು ರೇಷ್ಮೆ ಸಾಕಾಣಿಕೆಗೆ ಬಳಸುತ್ತಿದ್ದ ಮನೆಯಲ್ಲಿ ಕಟ್ಟಿದ್ದ ಆಡು ಕುರಿ, ದನಗಳ ಮೇಲೆ ದಾಳಿ ಮಾಡಲು ಮುಂದಾಗಿದೆ.
ಈ ವೇಳೆ ಇದನ್ನು ನೋಡಿದ ಸ್ಥಳೀಯರು ಕೂಗಾಟ ನಡೆಸಿದ್ದಾರೆ. ಇದರಿಂದ ಬೆದರಿದ ಚಿರತೆ ರೇಷ್ಮೆ ಸಾಕಾಣಿಕೆ ಮನೆಗೆ ನುಗ್ಗಿದೆ. ಇದಕ್ಕೂ ಮುನ್ನ ಮನೆಯ ಮಾಲೀಕ ನಿಂಗೇಗೌಡ ಎಂಬುವವರ ಮೇಲೆ ದಾಳಿ ಮಾಡಿ ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ. ಅಲ್ಲದೆ ಗೌರಮ್ಮ ಎಂಬುವವರ ಮೇಲೆ ದಾಳಿ ಮಾಡಿ ಎರಡು ಕೈಗಳನ್ನು ಕಚ್ಚಿದೆ. ಗಾಯಾಳುಗಳನ್ನು ಕೂಡಲೇ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ಗಂಗಾಧರ್ ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳನ್ನು ಭೇಟಿಮಾಡಿ ಯೋಗಕ್ಷೇಮ ವಿಚಾರಿಸಿ ಚಿಕಿತ್ಸೆಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನಿನೊಂದಿಗೆ ಸ್ಥಳಕ್ಕೆ ತೆರಳಿ ಮನೆಯಲ್ಲಿ ಸಿಲುಕಿದ್ದ ಚಿರತೆಯನ್ನು ಸೆರೆಹಿಡಿದಿದ್ದಾರೆ. ಇದು ಸುಮಾರು ಎಂಟು ವರ್ಷದ ಗಂಡು ಚಿರತೆಯಾಗಿದೆ. ಗ್ರಾಮಗಳಲ್ಲಿ ಚಿರತೆಗಳ ಬಗ್ಗೆ ಮಾಹಿತಿ ದೊರಕಿದಲ್ಲಿ ಅರಣ್ಯ ಇಲಾಖೆಗೆ ತಿಳಿಸುವಂತೆ ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ್ ಮನವಿ ಮಾಡಿದ್ದಾರೆ.