ಮಂಡ್ಯ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಪ್ರತಿ ವಿಧಾನಸಭಾ ಚುನಾವಣೆ ವೇಳೆ ವರುಣಾ ಕ್ಷೇತ್ರದೊಂದಿಗೆ ತಳುಕುಹಾಕಿಕೊಳ್ಳುತ್ತದೆ.
ಈ ಬಾರಿಯೂ ಕೂಡ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಕೊನೆಯಹಂತದಲ್ಲಿ ಈ ಬಗ್ಗೆ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ತಮ್ಮ ಪುತ್ರ ಶಿಕಾರಿಪುರದಲ್ಲಿಯೇ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಿಸಿದ್ದಾರೆ.
2018ರಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದಾಗ ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರ ಹೆಸರು ಪ್ರಚಾರದಲ್ಲಿತ್ತು. ಈ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸಿದಲ್ಲಿ ಲಿಂಗಾಯತರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂಬ ಲೆಕ್ಕಾಚಾರವಿದೆ. ಮಂಡ್ಯ ಜಿಲ್ಲೆಯ ತೂಬೂಕನಕೆರೆ ಯಡಿಯೂರಪ್ಪನವರ ಹುಟ್ಟೂರು. ಈ ಸಂಬಂಧ ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧಿಸಿದರೆ ಪಕ್ಷ ಗಟ್ಟಿಯಾಗಲಿದೆ ಎಂಬುದು ಬಿಜೆಪಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ. ಅದೇ ರೀತಿ ವಿಜಯೇಂದ್ರ ಮತ್ತು ಟೀಮ್ ಶ್ರಮದಿಂದ ಕೃಷ್ಣರಾಜ ಪೇಟೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಕೆ ಆರ್ ನಾರಾಯಣ ಗೌಡ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು ಈಗ ಇತಿಹಾಸ. ಇದು ಕೂಡ ಅವರಿಗೆ ಪ್ಲಸ್ ಆಗಿ ಪರಿಣಮಿಸಿದೆ.
ವಿಜಯೇಂದ್ರ 2018ರಲ್ಲಿ ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದಾಗ ಬಿಜೆಪಿ ಹೈಕಮಾಂಡ್ ನಾಯಕರು ಯಡಿಯೂರಪ್ಪ ಅವರನ್ನು ಕರೆಸಿ ನಿಮ್ಮ ಪುತ್ರನ ಸ್ಪರ್ಧೆಯಿಂದ ಪಕ್ಷಕ್ಕೆ ಲಾಭವಾಗುವುದಿಲ್ಲ ಎಂದು ಕರೆದು ಟಿಕೆಟ್ ನಿರಾಕರಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು.
ನಂತರ 2021ರಲ್ಲಿ ವಿಧಾನಪರಿಷತ್ ಚುನಾವಣೆ ಎದುರಾದಾಗ ವಿಜಯೇಂದ್ರ ಅವರಿಗೆ ಪಕ್ಷದಿಂದ ನಾಮಪತ್ರ ಸಲ್ಲಿಸಲು ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿಜಯೇಂದ್ರ ಹೆಸರು ಮುಂದಿಟ್ಟಿದ್ದರು. ಆದರೆ ದೆಹಲಿ ನಾಯಕರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಸ್ವಂತ ಮಗನಿಗೆ ಟಿಕೇಟ್ ಕೊಡಿಸಲಾಗದ ಸ್ಥಿತಿ ಬಿಎಸ್‌ವೈ ಅವರಿಗೆ ಎದುರಾಗಿತ್ತು.
ಬದಲಾದ ಸನ್ನಿವೇಶದಲ್ಲಿ ಯಡಿಯೂರಪ್ಪ ಈಗಾಗಲೇ ಚುನಾವಣಾ ನಿವೃತ್ತಿ ಘೋಷಿಸಿ ವಿಜಯೇಂದ್ರ ಅವರಿಗೆ ಶಿಕಾರಿಪುರ ಟಿಕೇಟ್ ಕೊಡಿಸುವ ಯತ್ನದಲ್ಲಿದ್ದಾರೆ. ಮತ್ತೊಂದೆಡೆ ಮೂರನೇ ಬಾರಿಗೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಹೆಸರು ಹರಿದಾಡುತ್ತಿದೆ. ಸಿದ್ದರಾಮಯ್ಯ ಸ್ಪರ್ಧೆ ಖಚಿತವಾದ ಬಳಿಕ ವಿಜಯೇಂದ್ರ ಸ್ಪರ್ಧೆಗೆ ಒತ್ತಡ ಹೆಚ್ಚಿದೆ. ಆದರೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಹೋಗಿ ಶಿಕಾರಿಪುರದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿದರೆ ಎಂಬ ಆತಂಕ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ವರುಣಾದಲ್ಲಿ ವೀರಶೈವ ಲಿಂಗಾಯತರಿಗೂ ಸಾಕಷ್ಟು ಮತಗಳಿವೆ. ಈ ಭಾಗದಲ್ಲಿ ವಸತಿ ಸಚಿವ ವಿ.ಸೋಮಣ್ಣ ಪ್ರಭಾವ ಇದೆ. ಅದನ್ನು ಬಳಸಿಕೊಂಡು ಇತರರು ವಿಜಯೇಂದ್ರ ಅವರನ್ನು ಸೋಲಿಸಿದರೆ ವಿಜಯೇಂದ್ರ ಅವರ ಭವಿಷ್ಯ ಅಂಧಕಾರವಾಗಲಿದೆ. ಅಕಸ್ಮಾತ್ ಗೆದ್ದರೂ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಅವಮಾನ ಮಾಡಿ ಮನೆಗೆ ಕಳುಹಿಸಿದ ಕಳಂಕ ಅಂಟಿಕೊಂಡಿದೆ. ಇದು ಕುರುಬ ಸಮುದಾಯದ ಶಾಶ್ವತ ವಿರೋಧಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರವಿದೆ.
ಇದೆಲ್ಲ ಲೆಕ್ಕಾಚಾರ ಹಾಕಿದ ಯಡಿಯೂರಪ್ಪ ವರುಣಾದಲ್ಲಿ ಸ್ಪರ್ಧಿಸುವುದು ಬೇಡ ಎಂದು ವಿಜಯೇಂದ್ರಗೆ ಹೇಳಿ ಹುಟ್ಟೂರು ಶಿಕಾರಿಪುರದಲ್ಲಿಯೇ ಟಿಕೇಟ್ ಖಾತ್ರಿ ಮಾಡುವ ಯತ್ನದಲ್ಲಿದ್ದಾರೆ. ವಿಜಯೇಂದ್ರ ಅವರಿಗೆ ನನಗೆ ನೀಡಿದ ಪ್ರೀತಿ ವಿಶ್ವಾಸವನ್ನು ಮತದಾರರು ನೀಡಬೇಕೆಂದು ಅವರು ವಿನಂತಿಸಿದ್ದಾರೆ.