ಮೈಸೂರು, : ಮನೆಯವರು ಬಾಲ್ಯ ವಿವಾಹ ಮಾಡಲು ಮುಂದಾದ ವೇಳೆ ವಿರೋಧ ವ್ಯಕ್ತಪಡಿಸಿದ ಬಾಲಕಿಯೋರ್ವಳು ತಾನೇ ಖುದ್ದು ಅಧಿಕಾರಿಗಳಿಗೆ ಪತ್ರ ಬರೆದು ಬಾಲ್ಯ ವಿವಾಹವನ್ನು ತಪ್ಪಿಸಿ ತನಗೆ ಶಿಕ್ಷಣ ಕೊಡಿಸಿ ಎಂದು ಮನವಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಧಿಕಾರಿಗೆ ಪತ್ರ ಬರೆದಿರುವ ಬಾಲಕಿ ಮೂಲತಃ ಹಾಸನದವಳು ಎನ್ನಲಾಗಿದ್ದು, ತನಗೆ ತಂದೆ ತಾಯಿ ಇಲ್ಲದ ಕಾರಣ ಮನೆಯಲ್ಲಿ ಮದುವೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ. ನನಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ಬಾಲಕಿ ಮನೆ ಬಿಟ್ಟು ಬಂದು ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿರುವ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದಳು. ನಂತರ ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಧಿಕಾರಿಯನ್ನು ಸಂಪರ್ಕಿಸಿ ಬಾಲಕಿ ಪತ್ರ ನೀಡಿದ್ದಾಳೆ. ಇದೀಗ ಬಾಲಕಿಗೆ ಬಾಲಮಂದಿರಲ್ಲಿ ಆಶ್ರಯ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.