ಮೈಸೂರು: ಸತ್ತ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾನಪತ್ರ ಸೃಷ್ಟಿಸಿ ಲಪಟಾಯಿಸಲು ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೈಸೂರು ತಾಲ್ಲೂಕು ರಮ್ಮನಹಳ್ಳಿ ಗ್ರಾಮ ಸಹಾಯಕ ಸಿದ್ದಯ್ಯ, ಚಿನ್ನಸ್ವಾಮಿ, ಸುಶೀಲಮ್ಮ, ಪತ್ರಬರಹಗಾರ ಮೆಲ್ಲಹಳ್ಳಿ ಮಂಚಪ್ಪ ಬಂಧಿತರು.
‘ತಾಲ್ಲೂಕು ಕಚೇರಿಯಲ್ಲಿ ಖಾತೆ ಬದಲಾವಣೆ ಮಾಡಿಸುವ ಸಂದರ್ಭದಲ್ಲಿ ಗ್ರಾಮದ ಮಂಜುನಾಥ್, ಸಾಮಾಜಿಕ ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ಅವರು ಅಕ್ರಮದ ಬಗ್ಗೆ ಬಹಿರಂಗಪಡಿಸಿ ಕ್ರಮಕ್ಕೆ ದೂರು ನೀಡಿದ್ದರು. ಈ ಸಂಬಂಧ ನಾಲ್ವರನ್ನು ಗುರುವಾರ (ಆ.19) ಬಂಧಿಸಲಾಗಿದೆ’ ಎಂದು ನರಸಿಂಹರಾಜ ಠಾಣೆ ಪೊಲೀಸರು ತಿಳಿಸಿದರು. ‘ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮ ಸರ್ವೆ ನಂ.244/2 ರ 4 ನಾಲ್ಕು ಎಕರೆ 4 ಗುಂಟೆ ಜಮೀನು ಎನ್.ಆರ್.ಮೊಹಲ್ಲಾದ ಗಾಣಿಗರ ಬೀದಿ ನಿವಾಸಿ ಎ.ಚೆಲುವರಾಜ್ ಅವರಿಗೆ ಸೇರಿತ್ತು. ಪಾಳು ಬಿದ್ದಿರುವುದನ್ನು ಗಮನಿಸಿದ ನಾಲ್ವರು ಭೂಮಿ ಕಬಳಿಸಲು ಯತ್ನಿಸಿದ್ದರು. ಎ.ಚೆಲುವರಾಜ್ ಅವರು 1986ರಲ್ಲಿ ಮೃತಪಟ್ಟಿದ್ದಾರೆ. ಇವರ ಹೆಸರಿನ ಜಮೀನನ್ನು ಕಬಳಿಸಲು ಆ.ಸೆಲ್ವರಾಜ್ ಎಂದು ಹೆಸರು ಬದಲಾಯಿಸಿ ತಮ್ಮ ಮಗಳು ಲಕ್ಷ್ಮಮ್ಮ ಎಂಬುವರಿಗೆ ದಾನಪತ್ರ ಮಾಡಿದಂತೆ 2019 ರಲ್ಲಿ ದಾಖಲೆ ಸೃಷ್ಟಿಮಾಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.