ಮೈಸೂರು: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪವನ್ನು ತಯಾರಿಸಿ ಮಾರಾಟ ಮಾಡುವುದರೊಂದಿಗೆ ಕೆಎಂಎಫ್ ಗೆ ಕಪ್ಪು ಚುಕ್ಕೆ ನೀಡಿದ್ದಲ್ಲದೆ, ಕೋಟ್ಯಂತರ ರೂ. ಅಕ್ರಮ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಎಪಿಎಂಸಿ ಬಳಿಯ ಹೊಸಹುಂಡಿ ಗ್ರಾಮದಲ್ಲಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಗೋದಾಮು ಪತ್ತೆಯಾಗಿದ್ದು, ಈ ನಕಲಿ ತುಪ್ಪದ ಸೃಷ್ಟಿಕರ್ತ ಯಾರು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ವಿಷಯ ತಿಳಿದು ಹ್ಯೂಮನ್ ರೈಟ್ಸ್ ತಂಡದ ಉಪಾಧ್ಯಕ್ಷ ಪ್ರದೀಪ್ ನೇತೃತ್ವದಲ್ಲಿ ದಾಳಿ ಮಾಡಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಘಟಕದಲ್ಲಿ ಡಾಲ್ಡಾ ತುಪ್ಪವನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಿ ಗೋಡೋನ್‌ನಲ್ಲಿ ಶೇಖರಿಸಿಡಲಾಗುತ್ತಿತ್ತು. ಈ ಬಗ್ಗೆ ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಶಾಂತ ಎನ್ನುವವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೆಎಂಎಫ್ ಅಧಿಕಾರಿಗಳು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ನಂದಿನಿ ತುಪ್ಪದ ರೂಪವೇ ಬರಲೆಂದು ಅದಕ್ಕೆ ಡಾಲ್ಡಾ ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ನಕಲಿ ತುಪ್ಪ, ನಂದಿನಿ ಲೇಬಲ್‌ಗಳು, ಪ್ಯಾಕಿಂಗ್ ಯಂತ್ರ ಪತ್ತೆಯಾಗಿವೆ. ಮೈಮುಲ್ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಮತ್ತು ಆಹಾರ ನಿಯಂತ್ರಣ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲಿರುವ ನಕಲಿ ವಸ್ತುಗಳನ್ನು ವಶಕ್ಕೆ ಪಡೆದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಕುರಿತು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಜರು ಮಾಡಿ ತನಿಖೆ ಕೈಗೊಂಡಿದ್ದಾರೆ.
ಸ್ಥಳೀಯರ ಪ್ರಕಾರ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಈ ಗೋದಾಮನ್ನು ಮುರುಗೇಶ್ ಹೆಸರಿನಲ್ಲಿ ಗುತ್ತಿಗೆ ಪಡೆದುಕೊಳ್ಳಲಾಗಿತ್ತು. 2-3 ತಿಂಗಳ ಹಿಂದೆಯಿಂದ ನಕಲಿ ತುಪ್ಪ ತಯಾರಿಕೆ ಮಾಡಲಾಗುತ್ತಿತ್ತು ಇಲ್ಲಿ ಪ್ಯಾಕ್ ಆದ ನಕಲಿ ತುಪ್ಪವನ್ನು ನಗರದ ವಿವಿಧೆಡೆ ಕಳೆದ ನಾಲ್ಕು ತಿಂಗಳಿನಿಂದ ಮಾರಾಟ ಮಾಡಲಾಗಿದೆ. ಅಲ್ಲದೆ ತಮಿಳುನಾಡಿಗೂ ಸಹ ಮಾರಾಟ ಮಾಡಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇಲ್ಲಿ ತಯಾರಾದ ನಕಲಿ ತುಪ್ಪವನ್ನು ಮೈಸೂರು ನಗರದಲ್ಲಿ ಅಥವಾ ಸುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡುತ್ತಿರಲಿಲ್ಲ. ಇದನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ಕುಮಾರ್ ತಿಳಿಸಿದ್ದು, ಕೆಎಂಎಫ್ ಉತ್ಪಾದಿಸುವ ನಂದಿನಿ ತುಪ್ಪ ಶುದ್ಧವಾಗಿದ್ದು, ಗುಣಮಟ್ಟದಿಂದ ಕೂಡಿದೆ. ಅಧಿಕೃತ ನಂದಿನಿ ಫಾರ್ಲರ್, ಮಳಿಗೆಗಳಲ್ಲಿ ಈ ತುಪ್ಪವನ್ನು ಮಾರಾಟ ಮಾಡಲಾಗುತ್ತಿದ್ದು, ಇಲ್ಲಿಯೇ ಇದನ್ನು ಖರೀದಿಸಬೇಕು. ಗುಣಮಟ್ಟದ ಕುರಿತು ನಂದಿನಿ ಗ್ರಾಹಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.