ಮೈಸೂರು: ಕಳೆದ ಕೆಲವು ದಿನಗಳಿಂದ ಮೈಸೂರು ನಗರದಲ್ಲಿ ಮುಂಜಾನೆ ಮತ್ತು ರಾತ್ರಿ ನಡುಕ ಹುಟ್ಟಿಸುವ ಚಳಿ ಆರಂಭವಾಗಿದ್ದು, ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಹೀಗಿರುವಾಗ ಬೀದಿಗಳಲ್ಲಿ ಅಂಗಡಿ ಮಳಿಗೆಗಳ ಮುಂದೆ ಮಲಗಿ ಜೀವನ ಕಳೆಯುವ ನಿರ್ಗತಿಕರ ಬದುಕು ಶೋಚನೀಯವಾಗಿದೆ.
ಬೆಚ್ಚಗಿನ ಹೊದಿಕೆಯಿಲ್ಲದೆ, ನಡುಗುವ ಚಳಿಯಲ್ಲಿಯೇ ಮಲಗುವ ನಿರ್ಗತಿಕರ ಸಂಕಷ್ಟವನ್ನು ಅರಿತ ಕೆಎಂಪಿಕೆ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರವು ನಿರ್ಗತಿಕರಿಗೆ ಬೆಚ್ಚಗಿನ ಹೊದಿಕೆಯನ್ನು ನೀಡುವ ಅಭಿಯಾನವನ್ನು ಹಮ್ಮಿಕೊಂಡಿದ್ದು ಬೀದಿ ಬದಿಯಲ್ಲಿರುವ ನಿರ್ಗತಿಕರನ್ನು ಹುಡುಕಿ ಅವರಿಗೆ ಹೊದಿಕೆ ನೀಡುವ ಕಾರ್ಯವನ್ನು ಮಾಡುತ್ತಿದೆ.
ಈ ಅಭಿಯಾನಕ್ಕೆ ನಗರದ ನಂಜನಗೂಡು ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತವಿಜಯಾನಂದ ಸ್ವಾಮೀಜಿಯವರು ತಮ್ಮ ಆಶ್ರಮದ ಆವರಣದಲ್ಲಿ ಆಶ್ರಮದ ವತಿಯಿಂದ 500 ಹೊದಿಕೆಗಳನ್ನು ಟ್ರಸ್ಟ್ ನ ಸದಸ್ಯರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು ಮನುಷ್ಯ ನೆಮ್ಮದಿಯಿಂದ ಬದುಕಲು ಬಹುಮುಖ್ಯವಾಗಿ ಆರೋಗ್ಯವಂತನಾಗಿರಬೇಕು. ಚಳಿಗಾಲದ ವಿಪರೀತ ತಂಡಿಗಾಳಿ ಆರೋಗ್ಯ ಕೆಡಿಸುವ ಸಾಧ್ಯತೆಯಿದ್ದು ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕೆಡದಂತೆ ನೋಡಿಕೊಳ್ಳಬೇಕು.ಆದರೆ ನಿರಾಶ್ರಿತರು ಬಸ್ ತಂಗುದಾಣ, ರೈಲ್ವೆ ನಿಲ್ದಾಣ, ಕಟ್ಟಡಗಳು ಆಸ್ಪತ್ರೆ ದೇವಸ್ಥಾನದ ಬಳಿ ರಾತ್ರಿಯನ್ನು ಕಳೆಯುತ್ತಿದ್ದಾರೆ. ಅಂತಹವರನ್ನು ಮಾನವೀಯತೆ ಮತ್ತು ಸೇವಾಮನೋಭಾವದಿಂದ ಗುರುತಿಸಿ ಸಹಾಯ ಮಾಡುವುದರಿಂದ ಸಮಾಜದಲ್ಲಿ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೊದಿಕೆ ಅಭಿಯಾನ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷಅಯ್ಯಂಗಾರ್, ಕಾರ್ಯದರ್ಶಿ ಅಜಯ್ ಶಾಸ್ತ್ರಿ, ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷರಾದ ವಿಕಾಸ್ ಶಾಸ್ತ್ರಿ, ತೇಜಸ್ ಕೌಶಿಕ್, ಅನಂತರಾಮು ಮೊದಲಾದವರು ಇದ್ದರು.